ಪಕ್ಷ ವಿರೋಧಿ ಚಟುವಿಕೆಯಲ್ಲಿ ನಾನು ಮತ್ತು ರಮೇಶ ಜಾರಕಿಹೊಳಿ ತೊಡಗಿಲ್ಲ. ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರ ತ್ಯಾಗದಿಂದ ನೀವು ಅಧಿಕಾರ ಅನುಭವಿಸುತ್ತಿದ್ದಿರಿ ಎಂಬುದನ್ನು ಮರೆಯಬೇಡಿ ಎಂದು ವಿರೋಧಿಗಳಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಗೋಕಾಕ್ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು 17 ಶಾಸಕರು ಬಿಜೆಪಿ ಬರದೇ ಇದ್ದಿದ್ದರೆ ಯಾರೂ ಮಂತ್ರಿ, ರಾಜ್ಯಸಭಾ, ಡಿಸಿಎಂ ಆಗುತ್ತಿರಲಿಲ್ಲ. ಅವರ ತ್ಯಾಗದಿಂದ ನೀವು ಅಧಿಕಾರ ಅನುಭವಿಸುತ್ತಿದ್ದಿರಿ. ಅವರು ಬಂದಿದ್ದಕ್ಕೆ ಎಲ್ಲವೂ ಆಗಿದೆ. ದಯವಿಟ್ಟು ಆ 17 ಶಾಸಕರನ್ನು ಯಾರೂ ಮರೆಯಬೇಡಿ. ಭಿನ್ನಾಭಿಪ್ರಾಯ ಬದಿಗಿಟ್ಟು ನಾವೆಲ್ಲರೂ ಕೂಡಿ ಬಿಜೆಪಿ ಪಕ್ಷವನ್ನು ಬೆಳಗಾವಿ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಘಟಿಸೋಣ ಎಂದು ವಿರೋಧಿಗಳಿಗೆ ಕುಟುಕಿದರು.
ಬಿಜೆಪಿಯಲ್ಲಿ ಶುರುವಾಗಿರುವ ಜಗಳವನ್ನು ಸಮಾಧಾನದಿಂದ ಬಗೆಹರಿಸಿ, ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ಕರೆದುಕೊಂಡು ಹೋಗಿ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಗೆದ್ದು ಬರುವ ಪ್ರಯತ್ನ ಮಾಡುವುದು ಒಳ್ಳೆಯದು ಎಂದು ಎಲ್ಲ ನಾಯಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ವರಿಷ್ಠರು ಎನ್ನುವುದಕ್ಕಿಂತ ಇಡೀ ರಾಜ್ಯವನ್ನೇ ಕಟ್ಟುವ ಲೀಡರ್ಗಳು ಬೆಳಗಾವಿ ಜಿಲ್ಲೆಯಲ್ಲಿಯೇ ಇದ್ದಾರೆ. ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಉಮೇಶ ಕತ್ತಿ, ಜೊಲ್ಲೆ ಅವರು ಸೇರಿ ಎಲ್ಲರೂ ಕುಳಿತು ಮಾತಾಡಿ ಸಮಸ್ಯೆಯನ್ನು ಸಮಾಧಾನದಿಂದ ಬಗೆಹರಿಸುತ್ತೇವೆ. ಯಾಕೆಂದರೆ ನಾವೆಲ್ಲರೂ ಬಿಜೆಪಿ ಪಕ್ಷದಲ್ಲಿಯೇ ಇರುವವರು. ಮತ್ತೆ ನಾವು ಇಲ್ಲಿ ಪಾರ್ಟಿಯನ್ನು ಕಟ್ಟಬೇಕಿದೆ. ಮುಂದೆ ಮತ್ತೆ ಸರ್ಕಾರ ತರಬೇಕು ಎನ್ನುವುದು ಎಲ್ಲರ ಆಸೆಯಿದೆ. ಎಲ್ಲ ಮುಖಂಡರು ಕೂಡಿಕೊಂಡು ಹೊಂದಾಣಿಕೆ ಮಾಡಿಕೊಂಡು ಈ ಸಮಸ್ಯೆಯನ್ನು ಇಲ್ಲಿಯೇ ಕ್ಲೋಸ್ ಮಾಡುತ್ತೇವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಲಕ್ಷ್ಮಣ ಸವದಿ ಸಂಪರ್ಕದಲ್ಲಿದ್ದಾರೆ ಎಂಬ ಲಖನ್ ಜಾರಕಿಹೊಳಿ ಹೇಳಿಕೆಗೆ ನನಗೆ ಆ ವಿಷಯ ಗೊತ್ತಿಲ್ಲ. ವಿಷಯ ಗೊತ್ತಿರುವ ಬಗ್ಗೆ ಅಷ್ಟೇ ಹೇಳುತ್ತೇನೆ. ಗೊತ್ತಿಲ್ಲದೇ ಇರುವ ಬಗ್ಗೆ ಹೇಳುವುದಿಲ್ಲ ಎಂದರು. ಮೂವರು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆಗೆ ಬಿಜೆಪಿಗೆ ಬರುತ್ತಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ಬಗ್ಗೆ ಉಳಿದ ರಾಜಕೀಯ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದರು. ಇನ್ನು ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಈಗಾಗಲೇ ಹೇಳಿದ್ದಾರೆ. ಆದರೆ ಕೋರ್ಟ ಕೇಸ್ನಿಂದ ನೀಡಲು ವಿಳಂಬವಾಗುತ್ತಿದೆ. ಹೀಗಾಗಿ ಕೋರ್ಟ ಕೇಸ್ ಬಗೆಹರಿದ ಬಳಿಕ ಖಂಡಿತವಾಗಿ ಸಚಿವ ಸ್ಥಾನ ಸಿಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಜಿಲ್ಲೆಯ ಶಾಸಕರಿಂದ ವಿರೋಧ ವಿಚಾರಕ್ಕೆ ಆಯಾ ಜಿಲ್ಲೆಯವರಿಗೆ ಯಾರಿಗೂ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬಾರದು ಎಂದು ಪಕ್ಷದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಹೀಗಾಗಿ ಗೋವಿಂದ ಕಾರಜೋಳ ಅವರು ಬಾಗಲಕೋಟೆ ಜಿಲ್ಲೆಯವರಿದ್ದಾರೆ. ಅವರು ಇನ್ನೊಂದಿಷ್ಟು ದಿನ ಇರಲಿ, ಚೆನ್ನಾಗಿ ಕೆಲಸ ಮಾಡಲಿ, ಅವರಿಗೆ ನಾವು ಎಲ್ಲರೂ ಸಹಕಾರ ಕೊಟ್ಟು ಪಕ್ಷ ಕಟ್ಟಲು ಸಹಕರಿಸೋಣ ಎಂದರು.
ಒಟ್ಟಿನಲ್ಲಿ ಬೆಳಗಾವಿ ಬಿಜೆಪಿಯಲ್ಲಿ ಶುರುವಾಗಿರುವ ಜಗಳ ಸಧ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.