ಮನೆಯಂಗಳದಲ್ಲಿ, ತೋಟದಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು ನೀವು ಹತ್ತಿರ ಹೋದಂತೆ ಪುರ್ರನೆ ಹಾರಿ ಹೋಗುವುದನ್ನು ಕಂಡಿದ್ದೀರಿ. ಈ ಹಕ್ಕಿಗಳಿಗೆÀ ಚಳಿಗಾಲ ಸಂತಾನೋತ್ಪತ್ತಿ ಸಮಯ. ವಿವಿಧೆಡೆಯಿಂದ ಬೆಳಗಾವಿಗೆ ವಲಸೆ ಬಂದ ಹಕ್ಕಿಗಳನ್ನ ನೋಡುವುದೇ ಒಂದು ಕಣ್ಣಿಗೆ ಹಬ್ಬ. ಹಾಗಾದರೇ, ಬನ್ನಿ ನಾವೂ ಕೂಡ ನೋಡಿಕೊಂಡು ಬರೋಣ ವಲಸೆ ಬಂದ ಹಕ್ಕಿಗಳನ್ನ.
ಸೀ-ಗಲ್, ಬಾರ್ ಹೆಡೆಡ್ ಗುಜ್, ಪೇಟೆಂಡ್ ಸ್ಟಾರ್ಕ್, ಬ್ಲಾಕ್ ಹೆಡೆಡ್ ಕ್ರೇನ್, ಬ್ಲಾಕ್ ಸ್ಟಾರ್ಕ್, ಸ್ಮ್ಲಾಲ್ ಪ್ರೇಂಟಿಕೋಲ್, ಪಿನ್‍ಟೆಲ್ ಡಕ್ ಹೀಗೆ ಹತ್ತು ಹಲವು ಪ್ರಕಾರದ ಹಕ್ಕಿಗಳು ವಲಸೆ ಬಂದಿದ್ದು, ನಮ್ಮ ಬೆಳಗಾವಿ ನಗರಕ್ಕೆ . ಬೆಳಗಾವಿ ಸೇರಿದಂತೆ ಪ್ರದೇಶದಲ್ಲಿ ಸುಮಾರು 50 ಬಗೆಯ ಹಕ್ಕಿಗಳು ಕಾಣ ಸಿಗುತ್ತಿವೆ. ನಗರದ ವ್ಯಾಕ್ಸೀನ್ ಡಿಪೋ, ಬಳ್ಳಾರಿ ನಾಲಾ, ಖಾನಾಪೂರ ಸೇರಿದಂತೆ ಕೆರೆ-ಕೊಳ್ಳ, ನದಿ-ಹಳ್ಳ ಪ್ರದೇಶಗಳಲ್ಲಿ ಇಂತಹ ಹಕ್ಕಿಗಳ ಕಲರವ ಕೇಳ ಸಿಗುತ್ತಿದೆ. ತಮ್ಮ ಸೂಕ್ಷ್ಮ ಕಂಗಳಿಂದ ಅಪಾಯವನ್ನು ಗ್ರಹಿಸುವ ಹಕ್ಕಿಗಳು ಬೇಕೆಂದೆಡೆ ಹಾರಾಟ ನಡೆಸಬಲ್ಲ ಚಾಕಚಕ್ಯತೆಯನ್ನು ಹೊಂದಿರುತ್ತವೆ. ಇಂಥ ಕ್ಷಿಪ್ರ ಹಾರಾಟಕ್ಕೆ ಅವುಗಳಿಗಿರುವ ಸಪೂರ ಆಕಾರವೂ ನೆರವಾಗುತ್ತದೆ.
ಹಕ್ಕಿಗಳ ಕೆಲ ಪ್ರಭೇದಗಳು ಊರಿಂದೂರಿಗೆ ವಲಸೆ ಹೋಗುತ್ತವೆ, ಮತ್ತೆ ತವರೂರಿಗೆ ಹಿಂದಿರುಗುತ್ತವೆ. ತಮ್ಮ ಸಾಮಥ್ರ್ಯಕ್ಕನುಗುಣವಾಗಿ ವಲಸೆ ಹಕ್ಕಿಗಳು ಹತ್ತಾರು ಕಿಲೋಮೀಟರ್ ದೂರದಿಂದ ಸಹಸ್ರಾರು ಕಿಲೋಮೀಟರ್ ದೂರದವರೆಗೆ ಪ್ರಯಾಣ ಬೆಳೆಸಬಲ್ಲವು. ಕೆಲವೊಂದು ಸಲ ಹಿಮಾಲಯದ ತಪ್ಪಲಿನಿಂದ ದೇಶದ ಒಳನಾಡಿಗೆ ಬರುವ ಹಕ್ಕಿಗಳಿವೆ. ಈ ವಲಸೆ ಹಕ್ಕಿಗಳಲ್ಲಿ ಬಹುತೇಕ ಸಂಘಜೀವಿಗಳು, ಒಟ್ಟೊಟ್ಟಿಗೆ ತಮ್ಮ ಪಯಣ ಆರಂಭಿಸಿ ಮೊದಲಿನ ಸ್ಥಳಕ್ಕೆ ಹಿಂದಿರುಗುತ್ತವೆ.
ಒಂದು ಅಂದಾಜಿನಂತೆ ಈ ಹಕ್ಕಿಗಳು ಸಾಗುವ ವೇಗ ಗಂಟೆಗೆ ಮೂವತ್ತರಿಂದ ಎಂಬತ್ತು ಕಿಲೋಮೀಟರ್‍ಗಳು.ಧ್ರುವ ಪ್ರದೇಶದಲ್ಲಿ ವಾಸಿಸುವ ಹಕ್ಕಿಗಳು ಋುತು ಬದಲಾವಣೆಯಿಂದಾದ ಚಳಿಯ ತೀವ್ರ ಕೊರೆತ, ಹಿಮಪಾತ, ಹಿಮಗಾಳಿಯನ್ನು ತಪ್ಪಿಸಿಕೊಳ್ಳಲು ತಾತ್ಕಾಲಿಕವಾಗಿ ವಲಸೆ ಹೋಗುತ್ತವೆ. ಹಾಗೆಯೇ ಆಹಾರಕ್ಕಾಗಿ, ಸಂತಾನೋತ್ಪತ್ತಿಗೆ ಪ್ರಶಸ್ತವಾದ ಸ್ಥಳ ಹುಡುಕಾಟಕ್ಕಾಗಿಯೂ ಹಕ್ಕಿಗಳು ವಲಸೆ ಹೋಗುತ್ತವೆ. ಸೂರ್ಯನ ಬೆಳಕೇ ಬೀಳದ ಋುತುಗಳಲ್ಲಿ ಬೆಳಕು, ಬೆಚ್ಚನೆಯ ವಾತಾವರಣವನ್ನು ಅರಸಲೂ ಇಂಥ ಪಯಣಗಳನ್ನು ಹಕ್ಕಿಗಳು ಕೈಗೊಳ್ಳುತ್ತವೆ. ವಲಸೆ ಬಂದ ಹಕ್ಕಿಗಳ ಈ ಮನ ಮೋಹಕ ದೃಶ್ಯಗಳನ್ನ ಸೆರೆ ಹಿಡಿದಿದ್ದು, ಬೆಳಗಾವಿಯ ವನ್ಯಜೀವಿ ಛಾಯಾಚಿತ್ರಗಾರ ಆನಂದ ಪೀಪರೆ. ಇವರು ಮನಪಾ ಸಿಬ್ಬಂದಿಯಾಗಿದ್ದರು, ಇವರು ವಲಸೆ ಬಂದ ಹಕ್ಕಿಗಳು ಹಾಗೂ ವನ್ಯಜೀವಿಗಳ ಛಾಯಾಚಿತ್ರಗಳನ್ನ ಸೆರೆ ಹಿಡಿಯುವ ಒಂದು ಅತ್ಯದ್ಭುತ ಹವ್ಯಾಸವನ್ನ ಹೊಂದಿದ್ದಾರೆ. ಈ ಬಾರಿ ಅತಿ ದೂರದ ವಿರಳ ಪಕ್ಷಿಗಳು ಕೂಡ ಬೆಳಗಾವಿಗೆ ಆಗಮಿಸಿದ್ದಾವೆ. ನೀರು ಹೆಚ್ಚಿರುವ ತನಕ ಅಂದರೇ ಅಕ್ಟೋಬರ್ ವರೆಗೂ ಈ ಪಕ್ಷಿಗಳು ಇಲ್ಲಿ ಇರಲಿವೆ ಎಂದು ಇನ್ ನ್ಯೂಸ್‍ಗೆ ಹೆಚ್ಚಿನ ಮಾಹಿತಿಯನ್ನ ನೀಡಿದರು.
ಈ ಬಾರಿ ಬೆಳಗಾವಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ವಲಸೆ ಬಂದ ಪಕ್ಷಿಗಳಿಗೆ ಅನುಕೂಲ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದಲೇ ತಿಬೇಟ್‍ದಂತಹ ದೇಶದಿಂದಲೂ ಪಕ್ಷಿಗಳು ಕುಂದಾನಗರಿಗೆ ಲಗ್ಗೆ ಇಡುತ್ತಿವೆ. ಇದು ಆಶ್ಚರ್ಯವೇ ಸರಿ.