ಆ ಗ್ರಾಮ ಐತಿಹಾಸಿಕ ನಗರದಿಂದ ಇರೋದು ಬರ್ರಿ ಏಳು ಕಿ.ಮೀ.ಅಂತರದಲ್ಲಿ. ಆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಮನೆಯ ಮುಂದೆ ನಲ್ಲಿ ಇದ್ದ್ಯಾಗೂ ಕೂಡಾ ನೀರು ಬಾರದೇ ಇರೊದ್ರಿಂದ ಜನರು ಸರಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಲೇ ಹಿಂಗೆ ಇನ್ನೂ ಬೇಸಿಗೆಗೆ ಹ್ಯಾಂಗಪಾ ಅನ್ನೋ ಪರಿಸ್ಥಿತಿ ಈ ಗ್ರಾಮಸ್ಥರದ್ದು. ಈ ಕುರಿತು ಇಲ್ಲಿದೆ ಡಿಟೇಲ್ಸ್….
ಹೌದು ವಿಜಯಪುರ ತಾಲೂಕಿನ ಜುಮನಾಳ ಗ್ರಾಮ ವಿಜಯಪುರ ನಗರದ ಹತ್ತಿರವೇ ಇದೆ. 7 ಸಾವಿರ ಜನಸಂಖ್ಯೆ ಈ ಗ್ರಾಮದಲ್ಲಿದೆ. ಇಲ್ಲಿ ಜಲ ಮಂಡಳಿಯಿಂದ ಗ್ರಾಮ ಪಂಚಾಯತಿಯವರು ಮನೆ ಮನೆಗೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದಾರೆ. ಆದರೆ ರೂಟಿನ್ ಪ್ರಕಾರ ನೀರು ಬಿಡಬೇಕಾದರೂ ವಾರಕ್ಕೆ ಒಂದು ಗಂಟೆ ಮಾತ್ರ ನೀರು ಬಿಡುತ್ತಿರುವ ಕಾರಣ ಜನರಿಗೆ ಸರಿಯಾದ ಸಮಯಕ್ಕೆ ನೀರು ಬರುತ್ತಿಲ್ಲ. ಗ್ರಾಮದಲ್ಲಿ ನೀರು ಪೂರೈಕೆ ಮಾಡುವ ಕೆಲಸ ಮಾಡುವ ಪಂಚಾಯತಿ ಸಿಬ್ಬಂದಿ ಪ್ರತಿ ವಾರ ಒಂದು ವಾರ್ಡ್ ಅಥವಾ ಏರಿಯಾಗೆ ನೀರು ಬಿಡುವ ಕಾರಣ ಉಳಿದವರು ತಮ್ಮ ಸರದಿ ಬರುವವರೆಗೆ ಕಾಯಬೇಕಾಗಿದೆ.
ಹೀಗಾಗಿ ಗ್ರಾಮದ ಜನರು ಪಕ್ಕದ ಹೊಲಗಳಲ್ಲಿ ನೀರು ತರುತ್ತಿದ್ದಾರೆ. ಸರ್ಕಾರದ ವ್ಯವಸ್ಥೆ ಇದ್ದರೂ ಕೂಡಾ ಸರ್ಕಾರದ ರೂಟಿನ್ ನಿಯಮ ಇಲ್ಲಿನ ಜನರಿಗೆ ಸರಿಯಾಗಿ ನೀರು ಸಿಗದಂತೆ ಮಾಡುತ್ತಿದೆ. ಗ್ರಾಮದಲ್ಲಿ ಒಟ್ಟು ಐದು ವಾರ್ಡ್ ಗಳಿದ್ದು, ವಾರಕ್ಕೊಮ್ಮೆ ಒಂದು ವಾರ್ಡ್ ಗೆ ನೀರು ಬಿಡಲಾಗುತ್ತದೆ. ಇದರಿಂದ ಮುಂದಿನ ವಾರ್ಡ್ ಪಾಳಿ ಬರಲು ತಿಂಗಳಾಗುತ್ತಿದೆ. ಇದು ಜನರ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೆ ಜುಮನಾಳ ಗ್ರಾಮ ಹೊಂದಿದ್ದು ಪಂಚಾಯತಿ ಸದಸ್ಯರು ಪಿಡಿಒ ನೀರಿನ ಸಮಸ್ಯೆ ಬಗೆ ಹರಿಸುತ್ತಿಲ್ಲ ಎಂದು ಗ್ರಾಮದ ಜನರು ಆರೋಪ ಮಾಡಿದ್ದಾರೆ. ಕೊಲ್ಹಾರ ತಾಲೂಕಿನ ಕೃಷ್ಣಾನದಿಯಿಂದ ವಿಜಯಪುರ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ.
ಅದೇ ನೀರನ್ನೂ ಜುಮನಾಳ ಗ್ರಾಮಕ್ಕೆ ನೀಡಲಾಗಿದೆ. ಆದರೆ ನೀರಿನ ಕೊರತೆಯ ಕಾರಣದಿಂದ ಇಲ್ಲಿ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಜೊತೆಗೆ ಜುಮನಾಳ ಗ್ರಾಮ ಪಂಚಾಯತಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ 18 ಲಕ್ಷ ಬಾಕಿ ಹಣವನ್ನೂ ನೀಡಬೇಕಿದೆ. ಇದೂ ಸಹ ಇಲ್ಲಿ ನೀರು ಪೂರೈಕೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವಂತೆ ಮಾಡಿದೆ. ಈ ಕಾರಣದಿಂದ ಇಡೀ ಗ್ರಾಮದ ಜನರು ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವಂತಾಗಿದೆ. ಒಂದು ಟ್ಯಾಂಕರ್ ಗೆ ಒಂದು ಸಾವಿರ ರೂಪಾಯಿ ನೀಡಬೇಕಿದೆ. ಗ್ರಾಮದ ಬಹುತೇಕರು ರೈತರು ಹಾಗೂ ಬಡವರಾಗಿದ್ದು ನೀರಿಗಾಗಿ ಒಂದು ಸಾವಿರ ಖರ್ಚು ಮಾಡದಂಥ ಸ್ಥಿತಿಯಲ್ಲಿದ್ದಾರೆ. ಹಣ ಖರ್ಚು ಮಾಡಲು ಸಾಧ್ಯವಾಗದೇ ಮೂರ್ನಾಲ್ಕು ಕಿಲೋ ಮೀಟರ್ ದೂರನಿಂದ ನೀರು ತರೋದು ಇವರಿಗೆ ಅನಿವಾರ್ಯವಾಗಿದೆ. ನೀರು ತರಲೆಂದೇ ಪ್ರತಿಯೊಂದು ಮನೆಯವರು ಒಬ್ಬರನ್ನು ಬಿಡಬೇಕಾಗಿದೆ…
ಜುಮನಾಳ ಗ್ರಾಮ ಜಲ್ ಜೀವನ್ ಮಿಷನ್ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು ಜಲ್ ಜೀವನ್ ಮಿಷನ್ ಕಾಮಗಾರಿ ಆರಂಭವಾಗಬೇಕಿದೆ. ಜೆಜೆಎಂ ಕಾಮಗಾರಿ ಆರಂಭವಾಗಿ, ಅದು ಮುಕ್ತಾಯವಾದ ಬಳಿಕ ಇಲ್ಲಿನ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ಅಲ್ಲಿಯವರೆಗೆ ಈ ಸಮಸ್ಯೆಗೆ ಪರಿಹಾರ ಸಿಗೋದು ಅಸಾಧ್ಯ. ಕಾರಣ ಜೆಜೆಎಂ ಯೋಜನೆ ಮುಕ್ತಾಯವಾಗಿ ನೀರು ಬಿಡೋವರೆಗಾದರೂ ಜಿಲ್ಲಾ ಪಂಚಾಯತಿಯವರು ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿದರೆ ಜುಮನಾಳ ಗ್ರಾಮದ ಜನರಿಗೆ ಅನಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಪಂ ಸಿಇಓ ಹಾಗೂ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕಿದೆ…
ಒಟ್ಟಿನಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳು ಸಹಿತನೀರಿನ ಬಾಟಲಿ ಹಿಡಿದುಕೊಂಡು ನೀರು ತುಂಬಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಈ ಗತಿಯಾದರೆ ಬೇಸಿಗೆ ಆರಂಭವಾದ ಬಳಿಕ ಹೇಗೆ ಎಂಬ ಆತಂಕ ಕೂಡಾ ಗ್ರಾಮದ ಜನರಲ್ಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟಂತ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಸ್ಥರ ಸಮಸ್ಯೆ ಬಗೆ ಹರಿಸಬೇಕಿದೆ…