ಇಂದು ಅದೆಷ್ಟೋ ವಿದ್ಯಾವಂತರು ತಮ್ಮ ಸ್ವಂತದ್ದು ಜಮೀನಿದ್ದರೂ ಸಹಿತ ಕಡಿಮೆ ಸಂಬಳಕ್ಕಾಗಿ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವ ರೈತ ಎಂ ಬಿ ಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿ ಪ್ರತಿ ತಿಂಗಳು 40 ಸಾವಿರ ಸಂಬಳ ಪಡೆದರು ಆ ಕೆಲಸಕ್ಕೆ ಗುಡ್ ಬೈ ಹೇಳಿ ವಿನೂತನ ರೀತಿಯಲ್ಲಿ ಆಡು ಸಾಕಾಣಿಕೆ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸಿ ಇತರರಿಗೆ ಮಾದರಿಯಾಗಿದ್ದಾನೆ. ಹಾಗಾದರೆ ಆ ಯುವ ರೈತನಾದರೂ ಯಾರು…? ಆತ ಪಡೆಯುತ್ತಿರುವ ಲಾಭವಾದರೂ ಎಷ್ಟು..? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ…
ಹೌದು ಹೀಗೆ ತಾನು ಸಾಕಿದ ಆಡುಗಳಿಗೆ ಮೇವು ಹಾಕುತ್ತಿರುವ ಈ ಯುವಕನ ಹೆಸರು ಸಾಯಿನಾಥ್ ಶೇರಖಾನೆ ಎಂದು. ಮೂಲತಃ ವಿಜಯಪುರ ನಗರದ ಗ್ಯಾಂಗ್ ಬಾವಡಿ ಬಡಾವಣೆಯ ನಿವಾಸಿಯಾದ ಸಾಯಿನಾಥ್ ಶೇರಖಾನೆ ಎಂ ಬಿ ಎ ಮುಗಿದ ಬಳಿಕ ಬೆಂಗಳೂರಿನಲ್ಲಿ ಒಂದು ಕಾರ್ಪೊರೇಟ್ ಕಂಪನಿಯಲ್ಲಿ ಎಚ್ ಆರ್ ಆಗಿ ಕೆಲಸಕ್ಕೆ ಕೂಡಾ ಸೇರಿಕೊಂಡಿದ್ದ. ಕೈ ತುಂಬಾ ಸಂಬಳ ಕೂಡಾ ಬರುತ್ತಿತ್ತು, ಆದರೆ ಆತನಿಗೆ ಕೃಷಿ ಮಾಡಬೇಕು ಎಂಬ ಆಸಕ್ತಿ ಬಂದು ಹಿನ್ನಲೆಯಲ್ಲಿ ತಾನು ಮಾಡುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಮರಳಿ ಊರಿಗೆ ಬಂದು ಈಗ ಮಾದರಿ ರೈತನಾಗಿದ್ದಾನೆ. ತನಗಿರುವ ಎಂಟು ಎಕರೆ ಜಮೀನಿನಲ್ಲಿ 6 ಎಕರೆಯಷ್ಟು ಕಬ್ಬು ಹಾಕಿ ಇನ್ನೂಳಿದ ಎರಡು ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಸಿದ್ದಾನೆ. ಈ ಮೇವು ಬೆಳೆಸಲು ಪ್ರಮುಖ ಕಾರಣ ಆತ ವಿಭಿನ್ನ ತಳಿಯ ಆಡು ಸಾಕಾಣಿಕೆ ಮಾಡುತ್ತಿರುವದು…
ಪಂಜಾಬ್ ಬಿಟಲ್ ತಳಿಯ ಆಳೆತ್ತರದ ಆಡುಗಳ ಸಾಕಾಣಿಕೆಯಲ್ಲಿ ತೊಡಗಿಕೊಂಡದ್ದಾರೆ. ಈ ತಳಿಯ ಆಡುಗಳು ಬಹುಬೇಗ ಬೆಳೆಯುವದರಿಂದ ಅಧಿಕ ಆದಾಯ ಕೂಡಾ ಕೊಡುತ್ತವೆ. ಇನ್ನು ಜಿಲ್ಲೆಯ ಸಾಮಾನ್ಯ ಆಡುಗಳಿಗಿಂತ ಇವುಗಳು ವಿಭಿನ್ನವಾಗಿ ಕಾಣುವದರಿಂದ ಇವುಗಳ ಬೇಡಿಕೆ ಸಹಿತ ಹೆಚ್ಚಾಗಿರುತ್ತದೆ. ಇನ್ನೂ ಈ ಆಡುಗಳ 1 ತಿಂಗಳ ಮರಿಗೆ ಸುಮಾರು 16 ರಿಂದ 20 ಸಾವಿರ ಹಣ ಕೊಟ್ಟು ಖರೀದಿ ಮಾಡಿಕೊಂಡು ಹೋಗುತ್ತಾರೆ. ಜಿಲ್ಲೆಯ ರೈತರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಯ ಹಾಗೂ ಮಹಾರಾಷ್ಟ್ರ ರಾಜ್ಯದ ರೈತರು ಸಹಿತ ಇವರಲ್ಲಿಗೆ ಬಂದು ಆಡುಗಳನ್ನು ಖರೀದಿಸುತ್ತಾರೆ. ಇನ್ನು ಸಾಮಾಜಿಕ ಜಾಲತಾಣದ ಮೂಲಕ ಆಡುಗಳ ವ್ಯಾಪಾರ ವಹಿವಾಟನ್ನು ಇವರು ಮಾಡುತ್ತಾರೆ.
ಇನ್ನೂ ಈ ಆಡುಗಳಿಗಾಗಿಯೇ ಅತ್ಯಾಕರ್ಷಕ ಶೆಡ್ ಅನ್ನು ಕೂಡಾ ಇವರ ನಿರ್ಮಿಸಿದ್ದು ಆಡುಗಳು ಹಾಕುವ ಹಿಕ್ಕಿ, ಮೂತ್ರ ತಂತಾನೆ ಕೆಳಗಡೆ ಬಿದ್ದು ಶೆಡ್ ಕೂಡಾ ಸ್ವಚ್ಚವಾಗಿರುತ್ತದೆ ಜೊತೆಗೆ ಫಲವತ್ತಾದ ಗೊಬ್ಬರ ಕೂಡಾ ರಡಿಯಾಗುತ್ತದೆ. ಇನ್ನೂ ಸೆಡ್ ಪಕ್ಕದಲ್ಲೇ ಬಹುವಾರ್ಷಿಕ ಹಸಿರು ಮೇವನ್ನು ಸಹಿತ ಇವರು ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಥೈವಾನ್ ಸುಪರ್ ನೇಪಿಯರ್, ಇಂಡೋನೇಷಿಯಾ ಸ್ಮಾರ್ಟ ನೇಪಿಯರ್, ಸಿಒಎಪ್ಎಸ್-31 ತಳಿಯ ಮೇವು, ರೇಷ್ಮೆ ತಪ್ಪಲು, ಕುದುರೆ ಮೆಂತೆ, ಬೇಲಿ ಮೆಂತೆ ಹೀಗೆ ಹಲವು ಬಗೆಯ ಮೇವನ್ನು ಎರಡು ಎಕರೆಯಲ್ಲಿ ಬೆಳೆದು ಆಡುಗಳಿಗೆ ಹಾಕುತ್ತಿದ್ದಾರೆ. ವರ್ಷಕ್ಕೆ ಏನಿಲ್ಲ ಎಂದರು ಆಡುಗಳಿಂದಲೇ ಸುಮಾರು 10 ರಿಂದ 14 ಲಕ್ಷದಷ್ಟು ಆದಾಯ ಗಳಿಸಿ ಮಾದರಿ ರೈತರಾಗಿದ್ದಾರೆ ಸಾಯಿನಾಥ್. ಇನ್ನೂ ಇವರಿಂದ ಹಲವು ಯುವ ರೈತರು ಸಹಿತ ಪ್ರೇರೇಪಣೆಗೊಂಡಿದ್ದಾರೆ…
ತಿಂಗಳಿಗೆ ನಲವತ್ತು ಸಾವಿರ ಸಂಬಳ ಪಡೆಯುತ್ತಿದ್ದ ಕಾರ್ಪೋರೆಟ್ ಸಂಸ್ಥೆಯ ಕೆಲಸಕ್ಕೆ ರಾಜೀನಾಮೆ ನೀಡಿ ಈಗ ಆಡು ಸಾಕಾಣಿಕೆಯಿಂದ ಪ್ರತಿ ವರ್ಷ ಲಕ್ಷಾಂತರ ಲಾಭ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ…