ಬೆಳಗಾವಿ ಪಾಲಿಕೆಯ ಪ್ರಸಕ್ತ 2021-22 ನೇ ಸಾಲಿನ ಬಜೆಟ್ ತಯಾರಿ ಕುರಿತಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಪಾಲಿಕೆಯ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಬಜೆಟ್ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಜಿ. ಹಿರೇಮಠ, ಪಾಲಿಕೆ ಆಡಳಿತ ಡಿ.ಸಿ ಭಾಗ್ಯಶ್ರೀ ಹುಗ್ಗಿ ಗುಂಜೇರಿ, ಕಾರ್ಯನಿರ್ವಾಹಕ ಅಭಿಯಂತರರಾದ ಲಕ್ಷ್ಮಿ ನಿಪ್ಪಾಣಿಕರ್ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕೈಗಾರಿಕಾ ವಲಯದ ಮುಖಂಡರು, ಬೆಳಗಾವಿಯಲ್ಲಿ ಸಾಕಷ್ಟು ಗುಣಮಟ್ಟದ ಕೈಗಾರಿಕೆಗಳು ಹಾಗೂ ನುರಿತ ಕೆಲಸಗಾರರು ಇದ್ದಾರೆ. ಹಾಘಾಗಿ ಬೆಳಗಾವಿಯಲ್ಲಿ ಅನೇಕ ಉದ್ಯಮಗಳು ತಲೆಎತ್ತುವ ಸಾಧ್ಯತೆ ಇದೆ. ಆದರೆ ನಗರದಲ್ಲಿ ಮಾರ್ಕೆಟಿಂಗ್ ವ್ಯವಸ್ಥೆ ಸರಿ ಮಾಡಬೇಕು. ಇನ್ನು ಕೈಗಾರಿಕಾ ವಲಯದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು
ಇನ್ನು ಈ ವೇಳೆ ಮಾತನಾಡಿದ ಸತೀಶ್ ತೆಂಡುಲ್ಕರ್ ಬೆಳಗಾವಿ ನಗರದಲ್ಲಿ ವ್ಯಾಪಾರಿ ಅನುಮತಿ ಕುರಿತು ಆನ್ ಲೈನ್ ಪ್ರೊಸಿಜರ್ ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಬೇಕೆಂದು ಮನವಿ ಮಾಡಿದರು. ಮಾರ್ಕೆಟ್ ಏರಿಯಾ ಸೇರಿದಂತೆ ಬೆಳಗಾವಿಯ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರಿಗೆ ಹಾಗೂ ಇನ್ನಿತರರಿಗೂ ಸಾರ್ವಜನಿಕ ಶೌಚಾಲಯ ಹಾಗೂ ಕೆಲ ಪ್ರಮುಖ ಏರಿಯಾಗಳಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸವಾಗಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಿಕರು ಬೆಳಗಾವಿ ನಗರದಲ್ಲಿರುವ ಸ್ಮಶಾನ ಭೂಮಿಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಇದಕ್ಕೆ ಆದೇಶ ನೀಡಿದರೆ ಬೆಳಗಾವಿ ನಗರದ ಅನೇಕ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಲು ಸಿದ್ಧರಿದ್ದು ಈ ಕುರಿತಂತೆ ಕಾರ್ಯವಾಗಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ನಾಗರಿಕರಿಂದ ಎಲ್ಲ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಮಾತನಾಡಿ, ಬೆಳಗಾವಿ ನಗರದಲ್ಲಿರಬಹುದಾದ ಎಲ್ಲಾ ಸಮಸ್ಯೆಗಳ ಕುರಿತಂತೆ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗಿದೆ. ಇನ್ನು ಈ ಕುರಿತಂತೆ ಬಜೆಟ್ ತಯಾರಿಸುವ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಪಾಲಿಕೆಯೊಂದಿಗೆ ಚರ್ಚಿಸಿ ನಿಮ್ಮ ಸಲಹೆ ಸೂಚನೆಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ಈ ವೆಳೆ ಸಭೆಯಲ್ಲಿ ಬೆಳಗಾವಿ ನಗರದ ಕೈಗಾರಿಕಾ ವಲಯದ ಸದಸ್ಯರು, ಹೊಟೇಲ್ ಅಸೋಸಿಯೇಶನ್ ಸದಸ್ಯರು, ಬೆಳಗಾವಿ ನಾಗರಿಕ ಕೌನ್ಸಿಲ್, ವಿವಿಧ ಎನ್‍ಜಿಓಗಳ ಸದಸ್ಯರು ಹಾಗೂ ಇತರರು ಕೂಡ ಉಪಸ್ಥಿತರಿದ್ದರು.