ಬೆಳಗಾವಿ ನಗರಕ್ಕೆ ಇದೇ ಮೊಟ್ಟ ಮೊದಲ ಬಾರಿಗೆ ಆಗಮಿಸಿದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳಿಗೆ ಜೈನ ಬಾಂಧವರು ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಂಡರು.
ಗುರುವಾರ ಬೆಳಗಾವಿಯ ಟಿಳಕಚೌಕ್ನಲ್ಲಿ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅವರಿಗೆ ಪಾದಪೂಜೆ ಮಾಡುವ ಮೂಲಕ ಜೈನ ಧರ್ಮದ ಶ್ರಾವಕ, ಶ್ರಾವಕಿಯರು ಅತ್ಯಂತ ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.
ಇದೇ ವೇಳೆ ಮಾತನಾಡಿದ ಜೈನ ಸಮಾಜದ ಮುಖಂಡ ರಾಜೀವ್ ದೊಡ್ಡನ್ನವರ ಇದು ನಮಗೆ ಅತ್ಯಂತ ಉಲ್ಲಾಸದ ಸಂದರ್ಭ. ಇದೇ ಮೊದಲ ಬಾರಿಗೆ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನಮ್ಮ ಬೆಳಗಾವಿಗೆ ಆಗಮಿಸಿದ್ದಾರೆ. ಅವರನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಬರಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ ಐತಿಹಾಸಿಕ ಬೆಳಗಾವಿ ನಗರಕ್ಕೆ ಮೊದಲ ಪುರ ಪ್ರವೇಶವಾಗಿದೆ. ಎಲ್ಲ ಶ್ರಾವಕ ಶ್ರಾವಕಿಯರು ಅತ್ಯಂತ ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ಎಲ್ಲರಿಗೂ ಶುಭ ಆಶೀರ್ವಾದಗಳು ಎಂದರು.
ನಂತರ ಟಿಳಕ ಚೌಕ್ನಿಂದ ಆರಂಭವಾದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅವರ ಮೆರವಣಿಗೆ ಅನಂತಶಯನ ಬೀದಿ, ಕುಲಕರ್ಣಿ ಬೀದಿ, ಶೇರಿ ಬೀದಿ ಮೂಲಕ ಮಠಬೀದಿಯ ಚಿಕ್ಕಬಸದಿಗೆ ಆಗಮಿಸಿ ಅಂತ್ಯವಾಯಿತು. ಈ ವೇಳೆ ಜೈನ ಯುವ ವೇದಿಕೆ, ಆರಾಧನಾ ಮಹಿಳಾ ಮಂಡಳ, ಧಾರಣಿ ಮಹಿಳಾ ಮಂಡಳ ಹಾಗೂ ಬೆಳಗಾವಿಯ ದಿಗಂಬರ ಜೈನ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.