Belagavi

ರೈತರ ವಿವಿಧ ಭೇಡಿಕೆಗಳಿಗೆ ಅಗ್ರಹಿಸಿ ಡಿಸೆಂಬರ್ ೨೦ರಂದು ಬೃಹತ್ ಪ್ರತಿಭಟನೆ

Share

ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ.20 ರಂದು ಸುವರ್ಣ ವಿಧಾನಸೌಧದ ಎದುರು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಬ್ಬಿಗೆ ಎಫ್ ಆರ್ ಪಿ ಮೊಸದ ಬೆಲೆ ನಿಗದಿ ಮಾಡಿದೆ. ರೈತರು ಕೊಳ್ಳುವ ಬೀಜ, ಗೊಬ್ಬರ, ಕೂಲಿ, ಸಾಗಣಿಕೆ ಮೂರು ಪಟ್ಟು ಹೆಚ್ಚಾಗಿದೆ. ಆದರೂ ಸರಕಾರ 5 ವರ್ಷದ ಹಿಂದಿನ ಬೆಲೆಯನ್ನೇ ನಿಗದಿ ಮಾಡಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಪ್ರತಿ ಟನ್ 3,500 ರೂ.ಬೆಲೆ ಕೊಡಬೇಕು ಮತ್ತು ರೈತರು ಸರಕಾರಕ್ಕೆ ಒಂದು ಟನ್ ಕಬ್ಜಿಗೆ 4,500 ರೂ. ತೆರಿಗೆ ಕೊಡುತ್ತಿದ್ದಾರೆ. ಅದರಲ್ಲಿ 2,000 ರೂ. ಸಹಾಯ ಧನ ನೀಡಬೇಕು ಎಂದರು.

ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಬ್ಯಾಂಕ್ ಅಧಿಕಾರಿಗಳು ರೈತರ ಆಸ್ತಿ ಜಪ್ತಿ, ಹರಾಜು, ಆನ್ ಲೈನ್ ಹರಾಜು ಮಾಡುತ್ತಿರುವುದರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಕೂಡಲೇ ಅವರು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾನೂನು ತರಬೇಕೆಂದು ಒತ್ತಾಯಿಸಿದರು.

ಸರಕಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂ. ಪ್ರೋತ್ಸಾಹ ಧನ ನೀಡುತ್ತಿರುವಂತೆ ಎಲ್ಲ ಜಿಲ್ಲೆಯ ರೈತರಿಗೂ ಕೊಡಬೇಕು. ಕೇಂದ್ರ ಸರಕಾರ ವಿದ್ಯುತ್ ಚ್ಛಕ್ತಿ ಖಾಸಗೀಕರಣ ಮಸೂದೆಯನ್ನು ಕೈ ಬಿಡಬೇಕು. ಅಲ್ಲದೆ ಕೇಂದ್ರ ಸರಕಾರ ರೈತ ವಿರೋಧಿ ಕೃಷಿ ಮಸೂದೆ ಕಾಯ್ದೆಯನ್ನು ಹಿಂಪಡೆದಿದೆ. ಅದರಂತೆ ರಾಜ್ಯ ಸರಕಾರವು ಈ ಅಧಿವೇಶನದಲ್ಲಿ ಕೃಷಿ ಮಸೂದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ತಂದಿದ್ದ ಭೂ ಸ್ವಾಧೀನ ಕಾಯ್ದೆಯನ್ನೇ ರಾಜ್ಯದಲ್ಲಿ ತರಬೇಕು. ಸರಕಾರ ಈಗ ಹೆಕ್ಟೇರ್ ಗೆ ನೀಡುತ್ತಿರುವ ಅತೀವೃಷ್ಠಿ ಪರಿಹಾರವನ್ನು ಎಕರೆಗೆ ನೀಡಬೇಕು. ಮತ್ತು ಮನೆ ಕಳೆದುಕೊಂಡವರಿಗೆ ಮನೆ ಪರಿಹಾರದ ಹಣವನ್ನು ತತಕ್ಷಣವೇ ಬಿಡುಗಡೆ ಮಾಡಬೇಕು. ನೆರೆ ಸಂತ್ರಸ್ತರಿಗೆ ಮತ್ತು ಮುಳುಗಡೆಯಾದ ಗ್ರಾಮಗಳಿಗೆ ಶಾಶ್ವತ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಕಳಸಾ ಬಂಡೂರಿ ನೀರಾವರಿ ಯೋಜನೆಯನ್ನು ಕಾಲಮೀತಿಯಲ್ಲೊ ಪೂರೈಸಬೇಕು. ಎಸ್ಸಿ ಎಸ್ಟಿ ಸಮುದಾಯಗಳಿಗೆ ಗಂಗಾ ಕಲ್ಯಾಣ ಯೋಜನೆ ಮತ್ತು 75 ಯೂನಿಟ್ ಉಚಿತ ವಿದ್ಯುತ್ ಚ್ಛಕ್ತಿಯನ್ನು ಎಲ್ಲಾ ಬಿ.ಪಿ.ಎಲ್ ಕಾಡ್೯ದಾರರಿಗೆ ಕೊಡಬೇಕು. ಹಾಲಿನ ಬೆಲೆಯನ್ನು 50 ರೂ.ಗಳಿಗೆ ನಿಗದಿ ಮಾಡಬೇಕೆಂದು ಈ ಅಧಿವೇಶನದ ರೈತ ಸಮಾವೇಶದಲ್ಲಿ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಶಶಿಕಾಂತ ಪಡಸಲಗಿ, ಬಾಬಾಗೌಡ ಪಾಟೀಲ, ರವಿ ಸಿದ್ಧಮ್ಮನವರ, ಮಲ್ಲಿಕಾರ್ಜುನ ರಾಮದುರ್ಗ, ರಾಘವೇಂದ್ರ ನಾಯಕ, ಶಿವಾನಂದ ಮುಗಳಿಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: