ಹೌದು ಮಹಿಳೆಯರು ಸ್ವ-ಸಹಾಯ ಸಂಘಗಳ ಸದಸ್ಯರಾಗುವ ಮೂಲಕ ಪ್ರತಿಯೊಬ್ಬರೂ ಆರ್ಥಿಕ ಸಾಕ್ಷರತೆ ಮತ್ತು ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸುವುದನ್ನು ಕಲಿಯಬೇಕು ಎಂದು ಖಾನಾಪುರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಏಗನಗೌಡರ ಕರೆ ನೀಡಿದರು.
ಅವರು ತಾಲ್ಲೂಕಿನ ಲೋಂಡಾ ಗ್ರಾಮದಲ್ಲಿ ಲೋಂಡಾ ಗ್ರಾಮ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಂಜೀವಿನಿ ಗ್ರಾ.ಪಂ ಮಟ್ಟದ ಮಹಿಳಾ ಒಕ್ಕೂಟ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳು ಜಂಟಿಯಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿಮೋಚನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಕೇವಲ ತಮ್ಮ ಮನೆಯ ಕೆಲಸಗಳಿಗೆ ಮಾತ್ರ ಸೀಮಿತರಾಗದೇ ತಮ್ಮ ಸುತ್ತಮುತ್ತಲಿನ ಇತರೆ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಬೇಕು. ಸಂಘಗಳಿಗೆ ಸರ್ಕಾರ ನೀಡುವ ಸ್ವ-ಉದ್ಯೋಗ ತರಬೇತಿಗಳನ್ನು ಮತ್ತು ಸಹಾಯಧನವನ್ನು ಪಡೆದು ಸ್ವಾವಲಂಬಿಗಳಾಗಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಮತ್ತು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಲಿಂಗತ್ವ ಆಧರಿತ ದೌರ್ಜನ್ಯ ತಡೆ ಅಭಿಯಾನ, ವಿಶೇಷ ಮಹಿಳಾ ಗ್ರಾಮ ಸಭೆ ಹಾಗೂ ಸ್ವಸಹಾಯ ಗುಂಪುಗಳ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಜರುಗಿದವು.
ಈ ಸಂದರ್ಭದಲ್ಲಿ ಕೌಶಲ್ಯ ಮತ್ತು ಆರ್ಥಿಕ ಸೇರ್ಪಡೆ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಕಿರಣ ಶಿಂಧೆ, ಜಿ.ಪಂ ಅಧಿಕಾರಿ ಬಾಳನಗೌಡ ಪಾಟೀಲ, ಎ.ಎಸ್.ಐ ಎಸ್.ಎಂ ಮುತಗಿ, ವೈದ್ಯಾಧಿಕಾರಿ ಡಾ.ಸುಶೀಲಕುಮಾರ, ಸಂಪನ್ಮೂಲ ವ್ಯಕ್ತಿಗಳಾದ ಸಂಜೀವಿನಿ ನಿಡವಣಿ, ಸಲೋನಾ ಓರಿಯಾ, ವೀರಭದ್ರಗೌಡ ಹೊಳೆಯಾಚೆ, ವಿಜಯ ಬಡಿಗೇರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
ಲೋಂಡಾ ಗ್ರಾ.ಪಂ ಅಧ್ಯಕ್ಷೆ ಶೇವರಿನ್ ಡಯಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಬಾಲರಾಜ್ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಭುತಕಿ ಸ್ವಾಗತಿಸಿದರು. ಮಹಾಂತೇಶ ತುರಮರಿ ವಂದಿಸಿದರು.