Belagavi

ಶೈಕ್ಷಣಿಕ ಜೀವನದ ಸದವಕಾಶ ಸಮರ್ಥವಾಗಿ ಬಳಸಿಕೊಳ್ಳಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿದ್ಯಾರ್ಥಿಗಳಿಗೆ ಕಿವಿಮಾತು

Share

ಬೆಳಗಾವಿ: ಶೈಕ್ಷಣಿಕ ಜೀವನದಲ್ಲಿ ಸಿಗುವ ಸದವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಜೀವನದಲ್ಲಿ ಅತ್ಯುನ್ನತ ಗುರಿ ಸಾಧಿಸಲು ಸಾಧ್ಯ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬೆನಕನಹಳ್ಳಿಯ ಬೆನ್‌ಸನ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯವರು ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ದಿನ  ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಕೇವಲ ಪಠ್ಯಕ್ರಮವನ್ನು ಓದಿ ಎಲ್ಲವನ್ನೂ ಸಾಧಿಸಲಾಗದು. ಬೌದ್ಧಿಕ ಬೆಳವಣಿಗೆಗೆ ಶಾರೀರಿಕ ಸದೃಢತೆ ಕೂಡ ಅವಶ್ಯಕ. ಈ ನಿಟ್ಟಿನಲ್ಲಿ ಓದಿನೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸ್ವಯಂಪ್ರೇರಣೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆಯ ಶಿಖರವೇರಬೇಕು ಎಂದರು.

ಕ್ರೀಡೆಯಲ್ಲಿ ಸಾಧನೆಗೈದವರಿಗೆ ಇಂದು ಸರಕಾರ ನಾನಾ ರೀತಿಯ ಅವಕಾಶಗಳನ್ನು ನೀಡಿದೆ. ಎಷ್ಟೋ ಜನ ಕ್ರೀಡೆಯಲ್ಲಿ ಸಾಧನೆಯಿಂದಲೇ ಉದ್ಯೋಗಾವಕಾಶ, ಉನ್ನತ ಸ್ಥಾನಮಾನಗಳನ್ನು ಗಳಿಸಿದ್ದಿದೆ. ಅಂಥವರನ್ನು ಪ್ರೇರಣೆಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಸಾಧನೆಯಲ್ಲಿ ತೊಡಗಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಸಲಹೆ ನೀಡಿದರು.

ಇದಕ್ಕೂ ಮುನ್ನ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಜೋಸ್ಫಿನ್ ಗುಂಟಿ, ಅಕಾಡೆಮಿಕ್ ನಿರ್ದೇಶಕಿ ರಚನಾ ಗೊರ್ಲೆ ಹಾಗೂ ಬೆನ್‌ಸನ್ಸ್ ನ ಎಲ್ಲ ಪದಾಧಿಕಾರಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Tags: