Belagavi

ವಿಧಾನಮಂಡಲ ಚಳಿಗಾಲ ಅಧಿವೇಶನ ಯಶಸ್ವಿ  ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ

Share

ಬೆಳಗಾವಿ, ಪ್ರಸಕ್ತ ಸಾಲಿನ ವಿಧಾನಮಂಡಲ‌ ಚಳಿಗಾಲ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಡೆದಿರುತ್ತದೆ. ವಸತಿ, ಊಟೋಪಹಾರ, ಸಾರಿಗೆ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನು ಬೆಳಗಾವಿ ಜಿಲ್ಲಾಡಳಿತವು ಅಚ್ಚುಕಟ್ಟಾಗಿ ಒದಗಿಸಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ ಒಂಭತ್ತು ದಿನಗಳ ಕಾಲ ಚಳಿಗಾಲ ಅಧಿವೇಶನ ಕಾರ್ಯಕಲಾಪಗಳು ಯಶಸ್ವಿಯಾಗಿ ಜರುಗಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ (ಡಿ.30) ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಇದುವರೆಗೆ ಬೆಳಗಾವಿಯಲ್ಲಿ 11 ಬಾರಿ ಅಧಿವೇಶನ ನಡೆದಿದೆ. ಈ ಬಾರಿ ಒಂಭತ್ತು ದಿನಗಳ ಕಾಲ ಅಧಿವೇಶನ ನಡೆಸಲಾಗಿದೆ. ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆ ಎಂದು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಶ್ಲಾಘಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯ ಶ್ರಮ ದೊಡ್ಡದು:

ಅಧಿವೇಶನ ನಡೆಯುವ ವೇಳೆ ಭದ್ರತೆ, ಸಾರಿಗೆ ವ್ಯವಸ್ಥೆ ನಿಯಂತ್ರಣ, ಗಣ್ಯರ ಭದ್ರತೆ ಸವಾಲಿನ ಕೆಲಸವಾಗಿದೆ. ಬೆಳಗಾವಿಯ ಪೊಲೀಸ್ ಇಲಾಖೆಯು ಇದನ್ನು ಸಮರ್ಪಕವಾಗಿ ನಿಭಾಯಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಭಾಧ್ಯಕ್ಷರು, ಒಟ್ಟಾರೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮ ದೊಡ್ಡದು ಎಂದರು.

ಒಂಭತ್ತು ದಿನಗಳ ಕಾಲ ಪ್ರತಿಭಟನೆಗಳು ಸೇರಿದಂತೆ ಪ್ರತಿಯೊಂದು ಹೋರಾಟ, ಪ್ರತಿಭಟನೆಯನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸಿರುತ್ತಾರೆ.
ಸಕಾಲದಲ್ಲಿ ಸಂಬಂಧಿಸಿದ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯುವ ಮೂಲಕ ಉತ್ತಮ ಸಮನ್ವಯತೆ ಸಾಧಿಸಿರುತ್ತಾರೆ ಎಂದು ಹೇಳಿದರು.
ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಅತ್ಯುತ್ತಮವಾಗಿ ಕೆಲಸ‌ ಮಾಡಿರುತ್ತಾರೆ. ಇದರಲ್ಲಿ ಸಾವಿರಾರು ಅಧಿಕಾರಿಗಳು/ಸಿಬ್ಬಂದಿ ಪಾಲ್ಗೊಂಡಿದ್ದು, ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಸದನ ಸಭಾಂಗಣದಲ್ಲಿ ಧ್ವನಿ, ಲೈಟು ಹಾಗೂ ಸುವರ್ಣ ಸೌಧದ ಆವರಣದಲ್ಲಿ ಸ್ವಚ್ಛತೆ ಮತ್ತಿತರ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಅವರು, ಪ್ರತಿವರ್ಷದ ಅನುಭವದ ಆಧಾರದ ಮೇಲೆ ಭದ್ರತೆ, ಸಾರಿಗೆ ನಿಯಂತ್ರಣ ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಅಧಿವೇಶನದ ಯಶಸ್ಸಿಗಾಗಿ ಜಿಲ್ಲಾಡಳಿತದ ವತಿಯಿಂದ ತೆಗೆದುಕೊಳ್ಳಲಾದ ಒಟ್ಟಾರೆ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಕಡಿಮೆ ಅವಧಿಯಲ್ಲಿ ಉಚಿತ ಸಾಫ್ಟವೇರ್ ವಿನ್ಯಾಸಗೊಳಿಸಿ 5012 ಜನ ಅಧಿಕಾರಿಗಳು/ಸಿಬ್ಬಂದಿಗೆ ಇ-ಪಾಸ್ ವಿತರಿಸಲಾಗಿತ್ತು. ಇದಲ್ಲದೇ ಸಾರ್ವಜನಿಕರಿಗೆ ಪ್ರವೇಶಪತ್ರಗಳನ್ನು ವಿತರಿಸಲು ಪ್ರವೇಶದ್ವಾರದ ಬಳಿ ಐದು ಕೌಂಟರ್ ಗಳನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದರು.
ಈ ಬಾರಿ ಯಾವುದೇ ಖಾಸಗಿ ವಾಹನವನ್ನು ಬಳಸದೇ‌ ಸರಕಾರಿ ವಾಹನಗಳನ್ನು ಬಳಸಿಕೊಂಡು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಅಧಿವೇಶನಕ್ಕೆ ನಿಯೋಜಿಸಲಾಗಿದ್ದ ವಾಹನಗಳ ಇಂಧನ ವೆಚ್ಚವನ್ನು ಆಯಾ ದಿನವೇ ಭರಿಸಲಾಗಿರುತ್ತದೆ.
ವಿಧಾನಸಭೆ ಸಭಾಧ್ಯಕ್ಷರು, ಪರಿಷತ್ ಸಭಾಪತಿಯವರು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಉನ್ನತ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವುದು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

ಪ್ರಧಾನಮಂತ್ರಿಯವರ ಮಾತೋಶ್ರೀ ನಿಧನ-ಒಂದು ನಿಮಿಷ ಮೌನಾಚರಣೆ:

ದೇಶದ ಪ್ರಧಾನಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಜಿಯವರ ತಾಯಿ ಹೀರಾಬೆನ್ ಅವರು ಸ್ವರ್ಗಸ್ಥರಾಗಿರುವ ಹಿನ್ನೆಲೆಯಲ್ಲಿ ಸಭೆಯ ಆರಂಭದಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ವಿವಿಧ ಉಪ ಸಮಿತಿಯ ಮುಖ್ಯಸ್ಥರಾಗಿದ್ದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗ್ದುಂ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೊಬರದ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ವಿಧಾನಸಭೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
**

Tags: