Belagavi

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ನಿಷೇಧಿಸಲು ಅಗ್ರಹಿಸಿ ಕುಂದಾನಗರಿಯಲ್ಲಿ ಖಡಕ್ ಪ್ರತಿಭಟನೆ

Share

ಗಡಿ ವಿಷಯವಾಗಿ ನಾಡದ್ರೋಹಿ ಎಂಇಎಸ್ ಝಾಪಾಗಳಿಗೆ ಪ್ರಚೋದನೆ ನೀಡಲು ಬೆಳಗಾವಿಗೆ ಆಗಮಿಸುತ್ತಿರುವ ಮಹಾರಾಷ್ಟ್ರದ ಸಚಿವರನ್ನು ಬೆಳಗಾವಿ ಗಡಿ ಪ್ರವೇಶಿಸದಂತೆ ನಿಷೇಧ ಹೇರುವಂತೆ ಹಾಗೂ ಕನ್ನಡ ಹೋರಾಟಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಕರ್ನಾಟಕ ಏಕೀಕರಣ ಸಮಿತಿಯ ವತಿಯಿಂದ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಾಗೂ ಉರುಳು ಸೇವೆ ನಡೆಸಿದರು. ಅಲ್ಲದೇ ಕನ್ನಡಿಗರಿಗೆ ನ್ಯಾಯ ನೀಡಲು ಆಗ್ರಹಿಸಿ ಘೋಷಣೆ ಕೂಗಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿದ ಕನ್ನಡ ಹೋರಾಟಗಾರರು, ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ನಾಡದ್ರೋಹಿ ಎಂಇಎಸ್‌ಗೆ ಕುಮ್ಮಕ್ಕು ನೀಡಲು ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸುತ್ತಿರುವ ಸಚಿವರಿಬ್ಬರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರ ಕನ್ನಡಿಗರೊಂದಿಗೆ ಮಲತಾಯಿ ಧೋರಣೆ ಮಾಡುತ್ತಿದೆ. ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಿಡಿದಿದ್ದಕ್ಕೆ ವಿದ್ಯಾರ್ಥಿಯನ್ನು ಅವಮಾನಿಸಿದ ಪೋಲಿಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸಂಘಟನೆಯ ಪದಾಧಿಕಾರಿಗಳು ಗಡಿ ವಿವಾದ ಸುಪ್ರೀಂಕೋರ್ಟ ಅಂಗಳದಲ್ಲಿದ್ದು , ಉಭಯ ಭಾಷಿಕಕರು ಸಹಬಾಳ್ವೆ ನಡೆಸುತ್ತಿರುವಾಗ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಕನ್ನಡಿಗರ ಹಿತರಕ್ಷಣೆಗೆ ಮುಂದಾಗದ ಜನಪ್ರತಿನಿಧಿಗಳ ಕನ್ನಡ ವಿರೋಧಿ ನಡೆಯನ್ನು ಖಂಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಗಡಿ ವಿವಾದ ಸುಪ್ರೀಂಕೋರ್ಟನಲ್ಲಿ ವಿಚಾರಣೆ ಹಂತದಲ್ಲಿ ಇರುವಾಗಲೇ ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ದೇಸಾಯಿ ಬೆಳಗಾವಿಯ ಎಂಇಎಸ್ ಪುಂಡರನ್ನು ಭೇಟಿಯಾಗಿ ಮುಗ್ದ ಮರಾಠಿಗರನ್ನು ಪ್ರಚೋದನೆ ಮಾಡಲು ಆಗಮಿಸುತ್ತಿದ್ದಾರೆ. ಮಹಾಜನ ವರದಿಗೆ ಒಳಪಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮರಾಠಿ ಭಾಷಿಕರಿಗೆ ಕರ್ನಾಟಕ ಸರ್ಕಾರ ಎಲ್ಲ ರೀತಿ ಮೂಲಭೂತ ಸೌಕರ್ಯಗಳನ್ನು ನೀಡಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಕಳೆದ ೫೦ ವರ್ಷಗಳಿಂದ ಕನ್ನಡಿಗರಿಗೆ ಕನಿಷ್ಠ ಮೂಲಭೂತ ಸೌಲಭ್ಯ ನೀಡದೆ ವಂಚಿಸಿದೆ. ಮಹಾರಾಷ್ಟ್ರ ಸಚಿವರು ಮೊದಲು ಆ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆ ಆಲಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ವಿ.ನರಸಿಂಹಮೂರ್ತಿ, ಜಿ.ಇಂದ್ರಾಣಿ, ಶಂಕರ, ರಶ್ಮಿ. ಆರ್., ವೆಂಕಟರಮಣ, ಪ್ರಸನ್ನಗೌಡ ಸೇರಿ ವಿವಿಧ ಕನ್ನಪಡರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.

Tags: