Belagavi

ವಿಪತ್ತು ನಿರ್ವಹಣೆ: ಅಣಕು ಪ್ರದರ್ಶನ  ಪೆಟ್ರೋಲಿಯಂ ಟ್ಯಾಂಕರ್ ಸೋರಿಕೆ: 25 ಜನರ ರಕ್ಷಣಾ ಕಾರ್ಯಾಚರಣೆ

Share

ಬೆಳಗಾವಿ,  ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್.ಡಿ.ಆರ್.ಎಫ್ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾ, ಅಣಕು ಪ್ರದರ್ಶನ ಸೋಮವಾರ (ಡಿ.5) ದೆಸೂರಿನ ಬಿಪಿಸಿಎಲ್-ಐಓಸಿಎಲ್ ಪೆಟ್ರೋಲಿಯಂ ಶೇಖರಣಾ ಕೇಂದ್ರದಲ್ಲಿ ನಡೆಯಿತು.

ಪೆಟ್ರೋಲಿಯಂ ಸ್ಟೋರೇಜ್ ಗಳಲ್ಲಿ, ಪೆಟ್ರೋಲಿಯಂ ವ್ಯಾಗನ್ ಟ್ಯಾಂಕರ್ ಸೋರಿಕೆ, ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನವನ್ನು ಕೈಗೊಳ್ಳಲಾಯಿತು.

ಬೆಳಗಾವಿ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್ ಹಾಗೂ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೋಡ ಇವರ ನಿರ್ದೇಶನದಂತೆ ಅಣಕು ಪ್ರದರ್ಶನ ಜರುಗಿತು.

ಅವಘಡ ಸಂಭವಿಸಿದ ಕುರಿತು ಮಾಹಿತಿ ಬಂದ ತಕ್ಷಣವೇ ಜಿಲ್ಲಾಡಳಿತದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚಿಸಿ, ಘಟನೆ ಸ್ಥಳಕ್ಕೆ ಭೇಟಿ ನೀಡಿ ಅವಘಡವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು.

ಸನ್ನಿವೇಶದಲ್ಲಿ ಶೇಕರಣೆಯಾದ ಪೆಟ್ರೋಲಿಯಂ ಕಳುಹಿಸುವ ಸಂದರ್ಭದಲ್ಲಿ ವ್ಯಾಗನ್ ಟ್ಯಾಂಕರ್ ಸೋರಿಕೆ(ಲೀಕೇಜ್) ಆಗಿದ್ದು, ಅದರಿಂದಾಗಿ ಪೆಟ್ರೋಲಿಯಂ ಶೇಖರಣಾ ಕೇಂದ್ರದ ಒಳಗಡೆ ಬೆಂಕಿ ಸಂಭವಿಸಿತು. ಅವಗಡದಲ್ಲಿ ಗಾಯಗೊಂಡಿರುವ 25 ಕಾರ್ಮಿಕರನ್ನು ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಿ, ಮೆಡಿಕಲ್ ಪೋಸ್ಟ್ ಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಸನ್ನಿವೇಶನ್ನು ಅಣಕು ಪ್ರದರ್ಶನದಲ್ಲಿ ತೆಗೆದುಕೊಂಡ ವಿಪತ್ತು ನಿರ್ವಹಣೆ ಕಾರ್ಯವನ್ನು ಕೈಗೊಳ್ಳಲಾಯಿತು.

ಅದೇ ರೀತಿ ಹೆಚ್ಚು ಗಾಯಗೊಂಡಿರುವ 9 ಗಾಯಾಳುಗಳನ್ನು ರಕ್ಷಿಸಿ, ಆಂಬುಲೆನ್ಸ್ ಮೂಲಕ ವೈದ್ಯಕೀಯ ತುರ್ತು ಚಿಕಿತ್ಸೆ ಒದಗಿಸಲು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.

ತಾಲೂಕಾ ಆರೋಗ್ಯಾಧಿಕಾರಿ ಮಾಸ್ತಿಹೊಳಿ, ವಡಗಾಂವ ಸಿಪಿಐ ಶ್ರೀನಿವಾಸ ಹಾಂಡ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ, ಭಾರತ ಪೆಟ್ರೋಲಿಯಂ ಟೆರಟರಿ ಮ್ಯಾನೇಜರ್ ಸುರೇಶ ಅಲಾಟೆ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನೀಲಗಾರ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಕಿರಣ್ ನಾಯಕ್, ಎನ್.ಡಿ.ಆರ್.ಎಫ್ ಇನ್ಸ್ಪೆಕ್ಟರ್ ಶಿವಕುಮಾರ, ಸಬ್ ಇನ್ಸ್ಪೆಕ್ಟರ್ ಶಾಂತಿ ಲಾಲ್ ಜಟಿಯಾ, ಬಿಪಿಸಿಎಲ್ ರಕ್ಷಣಾ ಅಧಿಕಾರಿ ವಿಮಲ್ ಸಿ. ಪಿ, ಐಓಸಿಎಲ್ ಡಿಪೋ ಮ್ಯಾನೇಜರ್ ಪುನೀತ್ ಮುರುಡೇಶ್ವರ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

10 ಅಗ್ನಿಶಾಕದಳದ ಸಿಬ್ಬಂದಿಗಳು, 25 ಗೃಹರಕ್ಷಕ ದಳ, 25 ಎನ್.ಡಿ.ಆರ್.ಎಫ್, 20 ವೈದ್ಯಕೀಯ ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಅಣಕು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

Tags: