Chitradurga

ಮೇದಾರ ಅಭಿವೃದ್ದಿ ನಿಗಮ ಸ್ಥಾಪನೆಗೆ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Share

ಚಿತ್ರದುರ್ಗ, ಜನವರಿ 07 :  ಮೇದಾರ ಸಮುದಾಯದ ಗುರುಗಳ ಹೆಸರಿನಲ್ಲಿ ಅಭಿವೃದ್ದಿ ನಿಗಮ ಸ್ಥಾಪಿಸಿ, ಬಿದಿರು ವೃತ್ತಿಗೆ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಅಖಿಲ ಭಾರತ, ಅಖಿಲ ಕರ್ನಾಟಕ ಮೇದಾರ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶವನ್ನು ಉದ್ಘಾಟಿಸಿದರು.

ನಿಗಮದಲ್ಲಿ ಹೊಸ ತಂತ್ರಜ್ಞಾನಗಳನ್ನು ತಂದು, ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಬಿದಿರಿನ ಹೊಸ ಉತ್ಪನ್ನಗಳನ್ನು ತಯಾರಿಸುವ ಕೇಂದ್ರಗಳನ್ನು ಸ್ಥಾಪಿಸಿ, ಆ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಜೋಡಿಸಬೇಕು. ಆನ್ಲೈನ್ ಮಾರುಕಟ್ಟೆಯ ಮೂಲಕ ರಾಜ್ಯದ ಬಿದಿರಿನ ಉತ್ಪನ್ನಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು. ಇದಕ್ಕೆ ಬೇಕಾಗಿರುವ ಬಂಡವಾಳವನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದರು.

ಸಮುದಾಯ ಭವನ :  ಸಮುದಾಯದ ಮಠದ ಅಭಿವೃದ್ಧಿಗೂ ಅನುದಾನ ಪೂರೈಸಲಾಗುವುದು. ಮೇದಾರ ಗುರುಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವುದು. ಮೇದಾರ ಸಮುದಾಯ ಹೆಚ್ಚಿರುವ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣ, ಜಿಎಸ್ ಟಿ ಪಾವತಿಯಲ್ಲಿ ಸೂಕ್ತ ತೀರ್ಮಾನದ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.

ಬಿದಿರಿನ ಅಭಿವೃದ್ಧಿಗಾಗಿ ವಿಶೇಷವಾದ ಜಮೀನು ಮೀಸಲು :  ಮೇದಾರ ಸಮುದಾಯದ ಬೇಡಿಕೆಗಳು ಬಿದಿರಿನ ಕೆಲಸದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಚೈನಾ ಮತ್ತು ಜಪಾನ್ ನಲ್ಲಿ ಬಿದಿರಿನ ಬಳಕೆಯ ಪ್ರಮಾಣದಲ್ಲಿ ಬದಲಾವಣೆಯಾಗಿದ್ದು, ಪೀಠೋಪಕರಣ, ದಿನೋಪಯೋಗಿ ವಸ್ತುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಬಿದಿರಿನ ಕೆಲಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬಿದಿರು ಸಿಗುವಂತಾಗಬೇಕು. ಕರ್ನಾಟಕದಲ್ಲಿ ಈ ಮುಂಚೆ 36 % ಕಾಡು ಇದ್ದಾಗ ಸಾಕಷ್ಟು ಬಿದಿರು ಸಂಪತ್ತು ಇತ್ತು. ಬಿದಿರಿನ ಮತ್ತೆ ನಾವು ಬೆಳೆದು ಈ ಉದ್ದೇಶಕ್ಕೆ ನೀಡುವ ವ್ಯವಸ್ಥೆ ಆಗಬೇಕಿದೆ. ನಮ್ಮ ಸರ್ಕಾರ ಬಿದಿರಿನ ಅಭಿವೃದ್ಧಿಗಾಗಿ ವಿಶೇಷವಾದ ಜಮೀನು ಮೀಸಲಿಟ್ಟು, ಅರಣ್ಯ ಇಲಾಖೆಯಿಂದ ಬಿದಿರನ್ನು ಬೆಳೆಸಿ ಸರಬರಾಜು ಮಾಡುವ ಕೆಲಸವನ್ನು ಮಾಡುತ್ತದೆ. ಯೋಗ್ಯ ಮತ್ತು ಸುಲಭ ದರವನ್ನು ನಿಗದಿಪಡಿಸಿ ಬಿದಿರಿನ ಖರೀದಿಗೆ ವ್ಯವಸ್ಥೆಯನ್ನು ಕಲ್ಪಿಸಿ, ಪ್ರತಿ ಬಿದಿರು ಕಸುಬುದಾರರಿಗೆ ಕೋಟಾವನ್ನು ನಿಗದಿಪಡಿಸಲಾಗುವುದು ಎಂದರು.

ಬೀದರ್ ನಲ್ಲಿರುವ ಕೇತೇಶ್ವರರ ಸಮಾಧಿಯ ಸುರಕ್ಷತೆಗೆ ಕ್ರಮ:
ಬೀದರ್ ನಲ್ಲಿರುವ ಕೇತೇಶ್ವರರ ಸಮಾಧಿಯ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಿಸರ್ಗದತ್ತವಾದ ಬಿದಿರಿನ ಸುಸ್ಥಿರ ಹಾಗೂ ನಿರಂತರ ಬೆಳವಣಿಗೆಯಾಗಿಸಲು ಹಲವು ಕ್ರಮಗಳ ಅವಶ್ಯಕತೆ ಇದೆ. ದುಡಿಮೆ ನಿಮ್ಮದು, ದುಡಿಮೆಗೆ ಬೆಲೆ ತರುವ ಕೆಲಸ ಸರ್ಕಾರದ್ದು. ಭೋವಿ ಜನಾಂಗದವರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಕಲ್ಲು ಒಡೆಯುವ ಭೋವಿಗೆ ಸಮಸ್ಯೆ ಬಗೆಹರಿಸಲು ಕಾನೂನುಗಳನ್ನು ಸರಳೀಕರಿಸುವ ವಿಚಾರವನ್ನು ಮುಂದಿನ ಅಧಿವೇಶನದಲ್ಲಿ ತರಲಾಗುವುದು. ಅಮೃತ ಯೋಜನೆಯಡಿ 354 ಕೋಟಿ ರೂ.ಗಳ ಅನುದಾನವನ್ನು ಕುರಿಗಾಹಿಗಳ ಸಂಘಗಳಿಗೆ ನೀಡಲಾಗುತ್ತಿದೆ. ಲಿಡ್ಕರ್ ನ ಉತ್ಪನ್ನಗಳನ್ನು ಹೆಚ್ಚಿಸಲಾಗುತ್ತಿದೆ. ಲಂಬಾಣಿ ಬಂಜಾರರ ತಾಂಡಗಳನ್ನು ಗ್ರಾಮಗಳನ್ನಾಗಿ ಮಾಡಿ ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ. ಕರ್ನಾಟಕದಲ್ಲಿ ಕಾಯಕ ಕ್ರಾಂತಿ ಆಗಬೇಕೆಂಬುದು ನನ್ನ ಆಸೆಯಾಗಿದೆ ಎಂದರು.

ಮೀಸಲಾತಿ ಹೆಚ್ಚಳ:
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ಹೆಚ್ಚಿಸಲಾಗಿದೆ. ಈ ಹೆಚ್ಚಳವನ್ನು ಕೇಂದ್ರ ಸರ್ಕಾರಕ್ಕೆ ಕಾನೂನಿನ ಚೌಕಟ್ಟಿನೊಳಗೆ ತರಲಾಗುವುದು. ನಮ್ಮ ಸರ್ಕಾರ ಜನಪರವಾದ ಬದಲಾವಣೆಯನ್ನು ತರುತ್ತಿದೆ. ಇತಿಹಾಸದ ಭಾಗವಾಗಬೇಕು ಇಲ್ಲವೇ ಇತಿಹಾಸವನ್ನು ಸೃಷ್ಟಿಸಬೇಕು. ಕೇಂದ್ರದಲ್ಲಿ ಪ್ರಧಾನಿ ಮೋದಿಯವರೂ ದೊಡ್ಡ ಬದಲಾವಣೆಗಳನ್ನು ತರುತ್ತಿದ್ದಾರೆ. ಎಲ್ಲ ಸಮುದಾಯದ ಗುರುಗಳು ನನ್ನೊಂದಿಗಿದ್ದಾರೆ ಎಂಬ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದೇನೆ ಎಂದರು.

ಕಾಯಕ ಕ್ರಾಂತಿ

12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾತ್ರವಲ್ಲದೆ ಕಾಯಕ ಕ್ರಾಂತಿ ಕೂಡ ಯಿತು. ಕಾಯಕಕ್ಕೆ ಗೌರವ ದೊರೆಯಬೇಕು. ಪ್ರತಿಯೊಂದು ಕಾಯಕವೂ ಅತ್ಯಂತ ಉತ್ಕೃಷ್ಟವಾದುದು. ಮೇಲೆ ಕೀಳೆಂಬ ಭಾವನೆಯನ್ನು ದೂರ ಮಾಡಲು ಕಾಯಕ ಸಮಾಜ ದೊಡ್ಡ ಅಸ್ತ್ರವಾಗಿ ಪ್ರಯೋಗವಾಯಿತು. ಆದರೆ ದುರ್ದೈವವಶಾತ್ ಕಲ್ಯಾಣ ಕ್ರಾಂತಿಯಾದ ಸಂದರ್ಭದಲ್ಲಿ ಕಾಯಕ ಕ್ರಾಂತಿಯಿಂದ ನಿರ್ಮಿತವಾದ ಸಮಾಜ ಅನುಭವ ಮಂಟಪದಲ್ಲಿ ಕಾಯಕಗಳಿಗೆ ಯೋಗ್ಯವಾದ ಸ್ಥಾನ ನೀಡಿದಾಗ ಎಲ್ಲಾ ಶರಣರು ದಿಕ್ಕಾಪಾಲಾದರು. ಕಾಯಕ ನಿರತ ಸಮಾಜದ ಶರಣರೂ ಬೇರೆ ಬೇರೆ ಭಾಗಕ್ಕೆ ಹೋದರು. ಎಲ್ಲಾ ಕಾಯಕಗಳೂ ಬಹುತೇಕವಾಗಿ ಕಲ್ಯಾಣ ಕ್ರಾಂತಿಯಾಗದೇ ಮುಂದುವರೆದಿದ್ದರೆ ಇಂದು ಇಡೀ ದೇಶದ ಚಿತ್ರವೇ ಬದಲಾಗುತ್ತಿತ್ತು, ವಿಶೇಷವಾಗಿ ಕರ್ನಾಟಕದ ಚಿತ್ರಣವೂ ಬದಲಾವಣೆಯಾಗುತ್ತಿತ್ತು. ಆದರೆ ಹಾಗಾಗದೇ 900 ವರ್ಷಗಳಾದರೂ ಲ್ಲರನ್ನೂಒಗ್ಗೂಡಿಸಿ, ಕಾಯಕದ ಜೊತೆಗೆ ಇವರಿಗೂ ಗೌರವ ನೀಡಿ ಮುಖ್ಯಾಹಿನಿಗೆ ತರುವ ಕೆಲಸ, ವಿದ್ಯಾರ್ಜನೆ ನೀಡಿ ಇತರೆ ವೃತ್ತಿಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಕೆಲಸ ಈವರೆಗೂ ಆಗಿಲ್ಲ. ಇನ್ನೂ ಪ್ರಯತ್ನದಲ್ಲಿಯೇ ಇದೆ.

ಅಂತ:ಕರಣವನ್ನು ವೃದ್ಧಿಸಿಕೊಳ್ಳಬೇಕು
ರಾಜ್ಯವನ್ನು ಕಟ್ಟಲು ದುಡಿಯುವ ವರ್ಗಕ್ಕೆ ಮನ್ನಣೆ ನೀಡಿ ಎಲ್ಲಾ ಶಕ್ತಿಯನ್ನು ತುಂಬಿದಾಗ ಮಾತ್ರ ನಿಜವಾಗಿಯೂ ಜನಪರವಾದ ನಾಡನ್ನು ಕಟ್ಟಬಹುದು.ಈ ದೇಶ ನಿರ್ಮಾಣ ಮಾಡುವುದು ತಳಮಟ್ಟದ ದುಡಿಯುವ ವರ್ಗ ರೈತರು, ಬೋವಿಗಳು, ಹಾಲುಮತದವರು, ಮೇದಾರರು, ಲಂಬಾಣಿಗಳು ಮುಂತಾದವರು. ನಿಸರ್ಗದತ್ತ ವಸ್ತುಗಳನ್ನು ಬಳಸಿ ಜನಪಯೋಗಿ ವಸ್ತುಗಳನ್ನು ತಯಾರಿಸಿ ತಮ್ಮ ಬದುಕನ್ನು ನಡೆಸುತ್ತಾರೆ.ಇವು ಸಮಾಜಕ್ಕೆ ಕೊಡುಗೆ ಕೊಡುತ್ತಿರುವ ಸಮುದಾಯಗಳು. ಜಾಗತೀಕರಣ, ಖಾಸಗೀಕರಣ, ಉದಾರೀಕರಣದಿದಾಗಿ ಈ ಸಮುದಾಯಗಳಿಗೆ ಹೊಡೆತ ಬಿದ್ದಿದೆ. ದೊಡ್ಡ ಪ್ರಮಾಣದ ಕಾರ್ಖಾನೆಗಳು ಬಂದು ಅಂತ:ಕರಣವನ್ನು ಮರೆತುಹೋಗಿದ್ದೇವೆ. ಇಂದು ನಮ್ಮ ಸರ್ಕಾರಗಳು ಆಡಳಿತ, ಅಧಿಕಾರಿಗಳು, ಸಮಾಜ, ಸಮಾಜದ ಪ್ರಭಾವಿಗಳು ಅಂತ: ಕರಣವನ್ನು ವೃದ್ಧಿಸಿಕೊಳ್ಳಬೇಕು. ಬಡಿಗೇರರು, ಕುಂಬಾರರು, ಮೇದಾರರು, ವಿಶ್ವಕರ್ಮರು, ಇಲ್ಲದೇ ಗ್ರಾಮಗಳು ನಡೆಯುವುದಿಲ್ಲ. ಅವುಗಳ ಜೊತೆಗೆಯೇ ಸಮುದಾಯ, ಗ್ರಾಮ, ನಾಡು ಬೆಳೆದಿವೆ. ನಮ್ಮ ಸರ್ಕಾರದ ಕಾರ್ಯಕ್ರಮ ಹಾಗೂ ನಿರ್ಣಯಗಳು ಈ ವರ್ಗಕ್ಕೆ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಿದೆ ಎಂದರು.

ಸಬಲ ರಾಜ್ಯ ನಿರ್ಮಾಣ
ವಸ್ತುನಿಷ್ಠವಾಗಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಚಿಂತನೆಯಾಗಬೇಕಿದೆ. ಈ ಬಗ್ಗೆ ಭಾಷಣಗಳಾಗಿವೆ. ಆದರೆ ಕಾರ್ಯಕ್ರಮಗಳೇನು ಎನ್ನುವುದು ಮುಖ್ಯ. ಅದಕ್ಕಾಗಿಯೇ ಕಾಯಕ ಯೋಜನೆಯನ್ನು ಘೋಷಿಸಲಾಗಿದೆ. ಗ್ರಾಮೀಣ ಕುಶಲಕರ್ಮಿಗಳಿಗೆ ವಿಶೇಷ 50 ಸಾವಿರ ಅನುದಾನ ನೀಡಿ ಸ್ವಾವಲಂಬಿಯಾಗುವಂತೆ ಇದೇ ವರ್ಷದಲ್ಲಿ 33 ಸಾವಿರ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ರೂಪಿಸಲಾಗಿದೆ. ಇವೆರೆಲ್ಲರೂ ಸ್ವಾವಲಂಬಿಗಳಾದಾಗ ಕನ್ನಡ ನಾಡು ಶ್ರೀಮಂತವಾಗುತ್ತದೆ. ನಾಡಿನ ಜನತೆ ಶ್ರೀಮಂತರಾಗಬೇಕು. ಆಗ ತನ್ನಿಂದತಾನೇ ರಾಜ್ಯ ಸಬಲವಾಗುತ್ತದೆ ಎಂದರು

ಸೀಬಾರದ ಮೇದಾರ ಗುರುಪೀಠ, ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಸ್ವಾಮೀಜಿ, ಸಚಿವ ಬಿ.ಸಿ.ನಾಗೇಶ್, ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ ಪಾಟೀಲ್, ಅಖಿಲ ಕರ್ನಾಟಕ ಮೇದಾರ ಗಿರಿ ಜನಾಂಗದ ಕಲ್ಯಾಣ ಸೇವಾ ಸಂಘದ ಅಧ್ಯಕ್ಷ ವೈ.ಕೆ.ಹಳೇಪೇಟೆ ಮೊದಲಾದವರು ಉಪಸ್ಥಿತರಿದ್ದರು.

Tags: