ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮತ್ತು ಅಧಿಕಾರದಲ್ಲಿ ಇಲ್ಲದೇ ಇರುವಾಗಲೂ ಜನಹಿತ ಕೆಲಸ ಮಾಡಿಲ್ಲ. ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ಮಾತ್ರ ಅಧಿಕಾರ ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಕಾಂಗ್ರೆಸ್ ಯಾವಾಗಲೂ ಜನಹಿತವಾಗಿ ಕೆಲಸ ಮಾಡಿಲ್ಲ. ಅಧಿಕಾರ ಹೇಗೆ ಹಿಡಿಯಬೇಕು..? ಅಧಿಕಾರವನ್ನು ಯಾವ ರೀತಿ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಬೇಕು ಎಂಬುದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ. ಹಿಂದಿನಿಂದಲೂ ನಾವು ನೋಡಿಕೊಂಡು ಬಂದಿದ್ದೇವೆ, ಹಲವಾರು ಪ್ರಸಂಗಗಳಿವೆ. ಯಾರೇ ನಾಯಕರು ಇರಲಿ, ಯಾರೇ ನಾಯಕರು ಬದಲಾವಣೆ ಆದರೂ ತಮ್ಮ ನೀತಿ, ನಿಲುವುಗಳು, ತಮ್ಮ ಸ್ವಾರ್ಥದ ರಾಜಕಾರಣ ಎಂದಿಗೂ ಬದಲಾಗೋದಿಲ್ಲ. ಅದು ಅವರ ಗುಣ ಧರ್ಮ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ಬಿಜೆಪಿ ಜನಪ್ರತಿನಿಧಿಗಳ ನಡುವಿನ ಟಾಕ್ವಾರ್ಗೆ ಪ್ರತಿಕ್ರಯಿಸಿದ ಸಿಎಂ ಬೊಮ್ಮಾಯಿ ಇದೊಂದು ರೀತಿಯಲ್ಲಿ ಅಭಿವೃದ್ಧಿ ಆಗಬೇಕು ಎಂಬ ವಿಭಿನ್ನವಾದ ಚಿಂತನೆಯಾಗಿದೆ. ಇಬ್ಬರು ಶಾಸಕರು ಮತ್ತು ಸಂಸದರನ್ನು ಕರೆದು ಮಾತನಾಡುತ್ತೇನೆ. ಅದರಲ್ಲಿ ಕೆಲಸ ಕಾರ್ಯಗಳು ಹೇಗೆ..? ಮತ್ತು ಯಾವಾಗ ಆಗಬೇಕು..? ಎಂಬುದು ಮಾತ್ರ ಇದೆ. ಬೇರೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ತರಹ ಅಭಿವೃದ್ಧಿ ಬಗ್ಗೆ ಪೈಪೋಟಿ ಇದ್ದಾಗ ಸಹಜವಾಗಿ ಬೇರೆ ಬೇರೆ ಅಭಿಪ್ರಾಯಗಳು ಇರುತ್ತವೆ ಎಂದು ಸಮರ್ಥಿಸಿಕೊಂಡರು.
ಬೆಂಗಳೂರಿನ ನವೀನಕುಮಾರ್ ಹಾಗೂ ಜ್ಯೋತಿ ದಂಪತಿಯ ಪುತ್ರ ಜನೀಶ್ ಎಂಬ ಎರಡು ವರ್ಷದ ಮಗು ಅಪರೂಪದಲ್ಲೇ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಿಎಂ ಬೊಮ್ಮಾಯಿ ಸರ್ಕಾರದ ಇತಿಮಿತಿಯಲ್ಲಿ ಮಗುವಿಗೆ ನೆರವು ನೀಡುತ್ತೇವೆ. ಮಗುವಿನ ಅನಾರೋಗ್ಯದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಮಗುವಿನ ಔಷಧದ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಇತಿಮಿತಿಯೊಳಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಚರ್ಚೆ ಮಾಡುತ್ತೇನೆ ಎಂದರು.
ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಬೊಮ್ಮಾಯಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.