hubbali

ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯ : ಪ್ರಮೋದ್ ಮುತಾಲಿಕ್

Share

ಕೋವಿಡ್, ಓಮೈಕ್ರಾನ್ ಭೀತಿ ರಾಜ್ಯದಲ್ಲಿ ತಗ್ಗಿದ್ದ ಪರಿಣಾಮ ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ತೆರವುಗೊಳಿಸಿದೆ. ಆದರೆ ಜಾತ್ರೆ, ಯಾತ್ರೆ ಹಾಗೂ ಉತ್ಸವಗಳ ಆಚರಣೆಗೆ ಅವಕಾಶ ನೀಡದೇ ನಿರ್ಬಂಧ ವಿಧಿಸಿದೆ. ಈ ಕಾರಣದಿಂದ ಕೂಡಲೇ ರಾಜ್ಯ ಸರ್ಕಾರ ಜ.4 ರ ಒಳಗಾಗಿ ಆಚರಣೆಗೆ ಅವಕಾಶ ನೀಡಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಕೋವಿಡ್ ನಿಯಮಗಳನ್ನು ಸಡಿಲಿಕೆಗೊಳಿಸಿ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿ, ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯವಾಗಿದೆ. ಕಳೆದ 2 ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧ ಹೇರಿರುವುದರಿಂದ ಜಾತ್ರೆ, ಉತ್ಸವಗಳ ನೆಚ್ಚಿ ಜೀವನ ನಡೆಸುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ ಎಂದರು.

ಸರ್ಕಾರ ವಿದೇಶಿ ಸಂಸ್ಕೃತಿಗೆ ನಿರ್ಬಂಧ ಸಡಿಲಗೊಳಿಸಿದ್ದು, ಆದರೆ ಸಾಂಪ್ರದಾಯಿಕ ಜಾತ್ರೆಗಳಿಗೆ ನಿರ್ಬಂಧನೆ ಹೇರಿರುವುದು ಖಂಡನೀಯ. ಇದನ್ನೇ ಮುಂದುವರಿಸಿಕೊಂಡು ಹೋದಲ್ಲಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಧೂಳಿಪಟವಾಗಲಿದೆ. ಹಿಂದುತ್ವ ಸಾರುವ ಬಿಜೆಪಿ ಸರ್ಕಾರ ಸಾಂಪ್ರದಾಯಿಕತೆಗೆ ಧಕ್ಕೆ ತಂದರೇ ಶಾಪ ತಟ್ಟಲಿದೆ, ನೀವೆಲ್ಲರೂ ಸತ್ತು ಹೋಗುತ್ತಿರಿ.‌ ಆದ್ದರಿಂದ ಧಾರ್ಮಿಕ ಸ್ಥಳಗಳಾದ ಯಲ್ಲಮ್ಮನ ಗುಡ್ಡ, ಚಿಂಚಲಿ ಮಾಯಕ್ಕ, ಸಿದ್ಧಾರೂಢ ಮಠ ಸೇರಿದಂತೆ ರಾಜ್ಯದ ಎಲ್ಲ ಧಾರ್ಮಿಕ ಕೆಂದ್ರಗಳಿಗೆ ಹಾಕಿರುವ ನಿರ್ಬಂಧವನ್ನು ಶೀಘ್ರವೇ ತೆರವುಗೊಳಿಸಬೇಕು. ಇದಕ್ಕಾಗಿ ಜ.04 ರಂದು ಶ್ರೀರಾಮ ಸೇನೆಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಹೋರಾಟಕ್ಕೆ ರಾಜ್ಯದ ಮಠಾಧೀಶರು ಬೆಂಬಲ ನೀಡಬೇಕು ಆದ್ದರಿಂದ ಅಂದು ರಾಜ್ಯದ ವ್ಯಾಪಾರಸ್ಥರ ಸಂಘದ ವತಿಯಿಂದ ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ತೆರಳಿ ಘೇರಾವು ಹಾಕಲಾಗುವುದು ಎಂದು ಮುತಾಲಿಕ್ ಎಚ್ಚರಿಸಿದರು.

ಹಿಜಾಬ್ ಹಾಕಿಕೊಂಡು ಬರುವ ಪ್ರಶ್ನೆ ಇಲ್ಲ..! ಉಡುಪಿಯ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ ಮುತಾಲಿಕ್ ಮಾತನಾಡಿ, ಹಿಜಾಬ್ ಹಾಕಿಕೊಂಡು ಬರುವ ಚರ್ಚೆ ಇಲ್ಲ, ಎಲ್ಲರೂ ಸಮವಸ್ತ್ರ ಧರಿಸಬೇಕು. ಅದರಲ್ಲಿ ಯಾವುದೇ ಜಾತಿ ಇಲ್ಲ. ಈ ರೀತಿಯ ಉದ್ಧಟತನ ಟೆರರಿಸ್ಟ್ ಮಟ್ಟಿಗೆ ತೆಗೆದುಕೊಂಡು ಹೋಗುತ್ತದೆ ಎಂದ ಅವರು ಇದು ಶಾಲೆಯೋ ಅಥವಾ ಧಾರ್ಮಿಕ ಕೇಂದ್ರವೋ ಎಂದು ಸಿಡಿಮಿಡಿಗೊಂಡರು. ಅವರವರ ಸ್ವಾತಂತ್ರ್ಯ ಆವರ ಮನೆಯಲ್ಲಿ ಇರಲಿ ಅಂತವರಿಗೆ ಟಿಸಿ ಕೊಟ್ಟು ಶಾಲೆಯಿಂದ ಹೊರಗೆ ಹಾಕಬೇಕು. ಪ್ರತ್ಯೇಕತೆಬೇಕು ಎಂದರೇ ಪಾಕಿಸ್ತಾನಕ್ಕೆ ಹೋಗಲಿ, ಇನ್ನೂ ಚಿಂತಾಮಣಿ ಶಾಲೆ ಕೊಠಡಿಯಲ್ಲಿ ನಮಾಜ್ ಮಾಡಿದ್ದಾರೆ. ಈ ಕುರಿತಂತೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ರೈಲು ನಿಲ್ದಾಣದಲ್ಲಿ ನಮಾಜಗೆ ಅವಕಾಶ ಮಾಡಿಕೊಟ್ಟಿದ್ದೀರಿ ಅಲ್ಲದೇ ಹುಬ್ಬಳ್ಳಿಯಲ್ಲೇ ಬಾಂಬಗಳು ಸಿಕ್ಕರೂ ಇನ್ನೂ ಅವರನ್ನು ಹಿಡಿಯೋಕೆ ಸರ್ಕಾರಕ್ಕೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

ಪತ್ರಿಕಾಗೋಷ್ಠಿಯಲ್ಲಿ ಅಣ್ಣಪ್ಪ ದೇವಡಕರ್ ಸೇರಿದಂತೆ ಮುಂತಾದವರು ಇದ್ದರು.

Tags: