ಹತ್ತು ಹಲವು ರಾಜಕೀಯ ಪಕ್ಷಗಳು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವುದನ್ನು ಬಂಡವಾಳ ಮಾಡಿಕೊಂಡು ಹತ್ತು ಹಲವಾರು ಚುನಾವಣೆ ಗೆದ್ದಿವೆ. ಆದರೆ ನಮ್ಮ ಉದ್ದೇಶ ಇದಾಗಿರಲಿಲ್ಲ ಬಹಳ ದಿನಗಳಿಂದ ತುಳಿತಕ್ಕೆ ಒಳಗಾದವರಿಗೆ, ಮುಖ್ಯ ವಾಹಿನಿಗೆ ಬಾರದವರಿಗೆ, ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾದವರಿಗೆ ಒಂದು ಸಮಾನವಾದ ಅವಕಾಶ, ನ್ಯಾಯ ಕೊಡಬೇಕು ಎನ್ನುವ ಅತ್ಯಂತ ಮನದಾಳದ ಕಳಕಳಿಯಿಂದ ಇದನ್ನು ಮಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವುದಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್ಸಿ ಎಸ್ಟಿ ಸಮುದಾಯದ ಮುಖಂಡರು ಬೆಂಗಳೂರಿನ ರೇಸಕೋರ್ಸ ನಿವಾಸಕ್ಕೆ ಆಗಮಿಸಿ ಸಿಎಂ ಬೊಮ್ಮಾಯಿ ಅವರಿಗೆ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಗೆ ಮಾಡಿರೋದು ಒಂದು ಐತಿಹಾಸಿಕ ನಿರ್ಣಯವಾಗಿದೆ. ಈ ಒಂದು ಬೇಡಿಕೆ ಕಳೆದ 50 ವರ್ಷಗಳ ಬೇಡಿಕೆಯಾಗಿತ್ತು. ಹತ್ತು ಹಲವಾರು ಸರ್ಕಾರಗಳು ಬಂದು ಹೋಗಿವೆ. ಅವರ್ಯಾರು ಕೂಡ ಈ ನಿರ್ಣಯ ತೆಗೆದುಕೊಳ್ಳಲು ಆಗಲಿಲ್ಲ. ಆದರೆ ಯಾರಿಗೂ ಮಾಡಲು ಆಗಲಿಲ್ಲ. ಅದಕ್ಕೆ ಕಾನೂನಾತ್ಮಕ ಸೇರಿ ಇನ್ನು ಹಲವಾರು ಕಾರಣಗಳಿವೆ. ನಾನು ಯಾರನ್ನೂ ದೂಷಣೆ ಮಾಡೋದಿಲ್ಲ. ಅದನ್ನು ಬಿಟ್ಟು ರಾಜಕೀಯ ಇಚ್ಛಾಶಕ್ತಿ ಅವಶ್ಯಕತೆ ಇತ್ತು. ಆ ಕೆಲಸವನ್ನು ನಾವು ಮಾಡಿದ್ದೇವೆ. ನನ್ನ ಸಚಿವ ಸಂಪುಟದ ಸಹುದ್ಯೋಗಿಗಳು, ಬಿಜೆಪಿ ಕೋರ್ ಕಮೀಟಿ, ಹಿರಿಯ ಮುಖಂಡರ ಎಲ್ಲರ ಆಶೀರ್ವಾದದೊಂದಿಗೆ ಇದನ್ನು ಮಾಡಿದ್ದೇವೆ. ಇದು ನಮ್ಮ ಬಿಜೆಪಿಯ ಧ್ಯೇಯ, ಬದ್ಧತೆಯಾಗಿದೆ ಎಂದರು.
: ಇದಕ್ಕೆ ಹತ್ತು ಹಲವು ವ್ಯಾಖ್ಯಾನಗಳಿವೆ. ಕೆಲವರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡದವರು ನಾವು ಮಾಡಿದ್ದೇವೆ ಎಂದು ಹೇಳುತ್ತಾರೆ. ಎಲ್ಲವನ್ನೂ ಮೀರಿ ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಒಂದು ದೊಡ್ಡ ಅಲೆ ಇಡೀ ರಾಜ್ಯದಲ್ಲಿ ಎದ್ದಿದೆ. ನಾವು ಎಲ್ಲಿ ಹೋದಲ್ಲಿ ಎಲ್ಲಾ ಕಡೆ ಎಸ್ಸಿ, ಎಸ್ಟಿ ಜನಾಂಗದವರು ಅತ್ಯಂತ ಸಂತೋಷದಿಂದ ಸ್ವಾಗತ ಮಾಡುತ್ತಿದ್ದಾರೆ, ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮೊನ್ನೆ ಬಳ್ಳಾರಿ, ಹೊಸಪೇಟೆ, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಹೋದಾಗ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ತಾವು ಕೂಡ ಸಂತೋಷ ವ್ಯಕ್ತಪಡಿಸಿದ್ದಿರಿ. ಬರುವಂತಹ ದಿನದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಈ ಸಮುದಾಯಕ್ಕೆ ಮಾಡಬೇಕು ಎನ್ನುವ ಇಚ್ಛಾಶಕ್ತಿ ಇದೆ. ಅದನ್ನು ನಾನು ಮಾಡಿಯೇ ತೀರುತ್ತೇನೆ. ಅದೇ ರೀತಿ ಸೌಲಭ್ಯಗಳಿಂದ ವಂಚಿತವಾಗಿರುವ ಇನ್ನಷ್ಟು ಹಿಂದುಳಿದ ಹತ್ತು ಹಲವಾರು ವರ್ಗಗಳಿಗೂ ನ್ಯಾಯ ಕೊಡುವ ವಿಚಾರ ನಮ್ಮ ಸರ್ಕಾರ ಮಾಡುತ್ತಿದೆ. ಅದನ್ನೂ ಕೂಡ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ವಿ.ಸುನಿಲ್ಕುಮಾರ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.