ಪ್ರತಿ ಮನೆಗೆ ಪ್ರತಿ ತಿಂಗಳ 200 ಯುನಿಟ್ ವಿದ್ಯುತ್ ಘೋಷಣೆ ಮಾಡಿದ್ದ ಕಾಂಗ್ರೆಸ್, ಇದೀಗ 2ನೇ ಗ್ಯಾರಂಟಿಯಾಗಿ ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು 2000 ರೂ. ನೀಡುವ ಘೋಷಣೆ ಮಾಡಿದೆ.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಈ ಗ್ಯಾರಂಟಿ ಕಾರ್ಡನ್ನು ಬಿಡುಗಡೆ ಮಾಡಿದರು. ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಈ ಕುರಿತು ಮೊದಲ ಚೆಕ್ ನ್ನು ಸಹಿ ಮಾಡಿ ಪ್ರಿಯಾಂಕಾ ಗಾಂಧಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಕರ್ನಾಟಕದ ಮಹಿಳೆಯರು ಇಡೀ ವಿಶ್ವದಲ್ಲಿ ಕರ್ನಾಟಕ ಕುರಿತು ಹೆಮ್ಮೆ ಪಡುವತೆ ಮಾಡಿದ್ದೀರಿ. ಕಿತ್ತೂರು ರಾಣಿ ಚನ್ನಮ್ಮ, ಬಸವಣ್ಣನವರ ನಾಡಿನಲ್ಲಿ ಹುಟ್ಟಿದ್ದೀರಿ. ಎಲ್ಲರೂ ಸಮಾನರು. ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ ನಾಡಿನಲ್ಲಿ ನೀವಿದ್ದೀರಿ. ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವಲ್ಲಿ ಮಹಿಳೆಯರು ಸದಾ ಮುಂದಿದ್ದೀರಿ ಎಂದು ಹೇಳಿದರು.
ಇಂದಿರಾ ಗಾಂಧಿಯವರು 33 ವರ್ಷದ ಮಗನನ್ನು ಕಳೆದುಕೊಂಡ ಮರುದಿನವೇ ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡರು. ಸೋನಿಯಾ ಗಾಂಧಿ ಅವರು 21ನೇ ವಯಸ್ಸಿನಲ್ಲಿ ರಾಜೀವ ಗಾಂದಿ ಅವರ ಮೇಲೆ ಪ್ರಮೇ ಉಂಟಾಗಿ ತಮ್ಮ ದೇಶವನ್ನೇ ತೊರೆದು ಭಾರತಕ್ಕೆ ಬಂದರು. ಆದರೆ 44ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ಈಗ 76ನೇ ವಯಸ್ಸಿನಲ್ಲೂ ದೇಶಕ್ಕೋಸ್ಕರ ಕೆಲಸ ಮಾಡುತ್ತಿದ್ದಾರೆ. ಇಂತಹ ಲಕ್ಷಾಂತರ ಮಹಿಳೆಯರು ಇಂದು ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಜೀವನದಲ್ಲಿ ಯಾವುದೇ ಸಂಕಷ್ಟ ಬಂದರೂ ನೀವು ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಕಾಲ ಮೇಲೆ ನೀವು ನಿಲ್ಲಬೇಕು ಎಂದು ಅವರು ಕರೆ ನೀಡಿದರು.
ಮಹಿಳೆಯರು ಬದುಕು ಸಾಗಿಸಲು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಿಮ್ಮ ಭವಿಷ್ಯವನ್ನು ನೀವಷ್ಟೆ ಬರೆಯಬಹುದು. ಬದಲಾವಣೆಗೆ ಇದು ಸಕಾಲವಲ್ಲವೇ? ಅದಕ್ಕೆ ನೀವು ಮುಂದಾಗಬೇಕು. ನಿಮ್ಮಲ್ಲಿ ಅಂತಹ ಶಕ್ತಿ ಇದೆ. ಪ್ರತಿ ಶತ 50ರಷ್ಟಿರುವ ನಿಮ್ಮಿಂದ ಬದಲಾವಣೆ ಸಾಧ್ಯ. ನಿಮಮ್ ಶಕ್ತಿಯನ್ನು ನೀವು ಅರಿತುಕೊಳ್ಳಿ ಎಂದು ಹೇಳಿದರು.
ನೀವು ಖುಷಿಯಿಂದ ಇದ್ದೀರಾ? ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ಬರುತ್ತಿದೆ. ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯಾ? ಬಿಜೆಪಿ ನಿಮಗೆ ನೀಡಿದ್ದ ಭರವಸೆ ಈಡೇರಿಸಿದೆಯಾ? ಕರ್ನಾಟಕದ ಮಂತ್ರಿಗಳು 40 ಪ್ರತಿಶತ ಲಂಚ ತಿನ್ನುತ್ತಿದ್ದಾರೆ ಎಂದು ಕೇಳಿದ್ದೇನೆ. ಒಂದೂವರೆ ಲಕ್ಷ ಕೋಟಿ ಲಂಚದಿಂದ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಬೆಂಗಳೂರು ನಗರಕ್ಕೆ 8 ಸಾವಿರ ಕೋಟಿ ಅಭಿವೃದ್ಧಿ ಕೆಲಸ ಬಂದರೆ 3200 ಕೋಟಿ ರೂ. ಲಂಚ ತಿನ್ನುತ್ತಾರೆ. ಪಿಎಸ್ಐ ಹಗರಣದ ಮೂಲಕ ಪೊಲೀಸ್ ಫೋರ್ಸನ್ನು ಮಾರಿಕೊಂಡಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಲಂಚ ಕೊಡದೆ ಕೆಲಸವಾಗುವುದಿಲ್ಲ. ಬೆಂಗಳೂರಿನಲ್ಲಿ ಗಾರ್ಮೆಂಟ್ ನಲ್ಲಿ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಕೋವಿಡ್ ಸಂದರ್ಭದಲ್ಲಿ ಸರಕಾರ ನೆರವಿಗೆ ಬಂದಿಲ್ಲ. ರಾಜ್ಯದ ಎಲ್ಲೆಡೆ ಮಹಿಳೆಯರ ಮೇಲೆ ಅಪರಾಧ ನಡೆಯುತ್ತಿದೆ. ಒಂದೇ ದಿನ 40 ಪ್ರಕರಣ ನಡೆದಿದೆ ಎಂದು ಕೇಳಿದ್ದೇನೆ. ಬೆಲೆಗಳು ಗಗನಕ್ಕೆ ಹೋಗಿದೆ. ಆದರೆ ಸರಕಾರ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆಲವೇ ಕೆಲವು ಬಂಡವಾಳಶಾಹಿಗಳಿಗಾಗಿ ಬಿಜೆಪಿ ಸರಕಾರ ಕೆಲಸ ಮಾಡುತ್ತಿದೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗುತ್ತಿದ್ದಾರೆ. ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿ, ರೈತರು ಕಷ್ಟದಲ್ಲಿದ್ದಾರೆ. ಇಡೀ ದೇಶ ಕಷ್ಟದಲ್ಲಿದೆ. ಕಾಂಗ್ರೆಸ್ ಸರಕಾರವಿದ್ದಾಗ ಇಂದಿರಾ ಕ್ಯಾಂಟಿನ್, ಕ್ಷೀರ ಭಾಗ್ಯ ಮಾತೃಪೂರ್ಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು. ಮಹಿಳೆೆಯರನ್ನು ಸಬಲೀಕರಣಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿತ್ತು. ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಿಸಿತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಕಷ್ಟಪಡುವ ಮಹಿಳೆಯರಿಗಾಗಿ ನಾ ನಾಯಕಿ ಯೋಜನೆ ಜಾರಿಗೊಳಿಸಲಾಗಿದೆ. ಪ್ರತಿ ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ರೂ. ನೀಡುವ ಘೋಷಣೆಯನ್ನು ಕಾಂಗ್ರೆಸ್ ಮಾಡುತ್ತಿದೆ. ಕರ್ನಾಟಕದ ಮಹಿಳೆಯರಿಗಾಗಿ ಪ್ರತ್ಯೇಕ ಬಜೆಟ್ ಘೋಷಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನಾನು ಕರ್ನಾಟಕ ಕಾಂಗ್ರೆಸ್ ಗೆ ಸೂಚಿಸಿದ್ದೇನೆ ಎಂದೂ ಅವರು ಹೇಳಿದರು.
ಈ ಚುನಾವಣೆಯನ್ನು ನಿಮಗೋಸ್ಕರ ಬದಲಾವಣೆ ಮಾಡುವುದಕ್ಕೆ ಸಂಕಲ್ಪ ಮಾಡಿ ಎಂದು ಪ್ರಿಯಾಂಕಾ ಕರೆ ನೀಡಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಿಯಾಂಕಾ ಗಾಂಧಿ ಅವರ ಭಾಷಣವನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದರು.
ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ, ಶಾಸಕರಾದ ಸೌಮ್ಯ ರಡ್ಡಿ, ರೂಪಾ ಶಶಿಧರ, ಮಾಜಿ ಸಚಿವೆ ಉಮಾಶ್ರೀ, ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ನೀತಾ ಮಾತನಾಡಿದರು.