Khanapur

ಖಾನಾಪೂರದಲ್ಲಿ ಪ್ರೊ ಕಬಡ್ಡಿ ಪಂದ್ಯಾವಳಿ: ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿಕೆ

Share

ಹೌದು ತಾಲೂಕಿನಲ್ಲಿ ಹೆಚ್ಚಿನದಾಗಿ ಗ್ರಾಮೀಣ ಪ್ರದೇಶ ಇರುವುದರಿಂದ ಇಲ್ಲಿನ ಕ್ರೀಡಾಪಟುಗಳು ಕಬ್ಬಡ್ಡಿ ಆಟವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಹಾಗೂ ಆಡುತ್ತಾರೆ. ಹೀಗಾಗಿ ನಾನು ಸಹ ಒಬ್ಬ ಕಬ್ಬಡ್ಡಿ ರಾಜ್ಯಮಟ್ಟದ ಕ್ರೀಡಾಪಟುವಾಗಿರುವುದರಿಂದ ಕಬ್ಬಡ್ಡಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ಖಾನಾಪೂರ ತಾಲೂಕಿನ ಕ್ರೀಡಾಪಟುಗಳಿಗಾಗಿ ಖಾನಾಪೂರ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಅಂಜಲಿತಾಯಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡು ಪ್ರೋತ್ಸಾಹಿಸುವ ಕಾರ್ಯ ಸದಾಕಾಲ ನಡೆಯುತ್ತಿದೆ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು.

ಪಟ್ಟಣದ ರಾಯಗಡ್ ನಿವಾಸದಲ್ಲಿ ಮಂಗಳವಾರದಂದು ಡಾ. ಅಂಜಲಿತಾಯಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಂತಹ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬರುವ ಜನವರಿ 5 ರಿಂದ 8ರವರೆಗೆ ಖಾನಾಪುರ ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಕೇವಲ ಖಾನಾಪುರ ತಾಲೂಕಿನ ಕ್ರೀಡಾಪಟುಗಳಿಗಾಗಿ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೆಯ ದಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ತಾಲೂಕಿನ ಪೂಜ್ಯರುಗಳಾದ ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ಹಿರೇಮುನವಳ್ಳಿ ಶಂಡಿಲೇಶ್ವರ ಮಹಾಸ್ವಾಮಿಗಳು, ಚಿಕ್ಕ ಮುನವಳ್ಳಿಯ ಶಿವಪುತ್ರ ಮಹಾಸ್ವಾಮಿಗಳು, ಜಾಂಬೋಟಿಯ ಅರುಣ್ ಮಹಾರಾಜರು, ಮೌಲಾನಾ ಇಮ್ತಿಯಾಜ, ಫಾದರ್ ನೆಲ್ಸನ್ ಪಿಂಟೊ, ಮೋಹನ್ ಮಹಾರಾಜರು, ಪಪಂ ಅಧ್ಯಕ್ಷ ಹಾಗೂ ತಾಲೂಕಿನ ಹಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ.

ಎರಡನೆಯ ದಿನ ಪಂದ್ಯಾವಳಿಯ ಉದ್ಘಾಟನೆಯನ್ನು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಕೂಡಿ ಉದ್ಘಾಟಿಸಲಿದ್ದಾರೆ. ಮೂರನೇ ದಿನದ ಪಂದ್ಯಾವಳಿಯನ್ನು ತಾಲೂಕಿನ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಮುಖಂಡರುಗಳು ಸೇರಿ ಉದ್ಘಾಟಿಸಲಿದ್ದಾರೆ

ಜನವರಿ 8ರಂದು ಅಂತಿಮ ದಿನ ಬಹುಮಾನ ವಿತರಣಾ ಸಮಾರಂಭದಲ್ಲಿ ಅಂತರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾಪಟುಗಳಾದ ಹಾಗೂ ತೆಲುಗು ಟೈಟನ್ಸ್ ಕ್ರೀಡಾಪಟು ಸಿದ್ದಾರ್ಥ್ ದೇಸಾಯಿ ಮತ್ತು ಯುಪಿ ಯೋದಾ ಕ್ರೀಡಾಪಟು ನಿತೀಶ್ ಕುಮಾರ್ ಭಾಗವಹಿಸಿ ಬಹುಮಾನವನ್ನು ವಿತರಣೆ ಮಾಡಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತುಗಳುನಾಡಲ್ಲಿದ್ದಾರೆ.

ಖಾನಾಪುರ್ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಒಂದು ನೂರಕ್ಕಿಂತ ಹೆಚ್ಚು ಪುರುಷರ ತಂಡಗಳು ಭಾಗವಹಿಸಲಿವೆ. ಹಾಗೂ 25ಕ್ಕೂ ಹೆಚ್ಚು ಮಹಿಳಾ ತಂಡಗಳು ಭಾಗವಹಿಸಲಿವೆ. ವಿಶೇಷವಾಗಿ ಮಹಿಳೆಯರ ಕಬ್ಬಡ್ಡಿ ಪಂದ್ಯಾವಳಿ ಹಮ್ಮಿಕೊಂಡಿರುವುದರಿಂದ ಅವರ ಸುರಕ್ಷತೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ದಿನನಿತ್ಯ ವೀಕ್ಷಣೆ ಮಾಡಲು ನಾಲ್ಕು ಸಾವಿರ ಜನ ಭಾಗವಹಿಸಿದ್ದರು. ಈ ವರ್ಷ ಪ್ರೇಕ್ಷಕರ ಗ್ಯಾಲರಿ 5000ಕ್ಕೆ ಏರಿಕೆ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಪ್ರೋತ್ಸಾಹಕರು ಬಂದು ಕ್ರೀಡೆಯನ್ನು ಗಮನಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಇದರ ಜೊತೆಯಾಗಿ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿ ಕ್ರೀಡಾಪಟುವಿಗೆ ಫೌಂಡೇಶನ್ ವತಿಯಿಂದ ಟೀ ಶರ್ಟ್ ಮಾಡಲಾಗುವುದು.

ಪಂದ್ಯಾವಳಿಯಲ್ಲಿ ಭಾಗವಹಿಸಿ ಪುರುಷರಿಗಾಗಿ ಬಹುಮಾನ ಪ್ರಥಮ 1ಲಕ್ಷ, ದ್ವಿತೀಯ 75ಸಾವಿರ ಮತ್ತು ತೃತೀಯ 50ಸಾವಿರ ಹಾಗೂ ಮಹಿಳೆಯರಿಗಾಗಿ ಬಹುಮಾನ ಪ್ರಥಮ 51ಸಾವಿರ, ದ್ವಿತೀಯ 41ಸಾವಿರ, ತೃತಿಯ 31ಸಾವಿರ ಮತ್ತು ನಾಲ್ಕನೇ 21ಸಾವಿರ ನೀಡಲಾಗುವುದು. ಇದರ ಜೊತೆಯಾಗಿ ವೈಯಕ್ತಿಕ ಬಹುಮಾನವಾಗಿ ಬೆಸ್ಟ್ ರೈಡರ್ 11ಸಾವಿರ, ಬೆಸ್ಟ್ ಡಿಫೆಂಡರ್ 11ಸಾವಿರ ಮತ್ತು ಬೆಸ್ಟ್ ಆಲ್ ರೌಂಡರ್ 15ಸಾವಿರ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ಅಲ್ತಾಫ್.ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: