ಮಹಿಳಾ ಕಾಂಗ್ರೆಸ್ ನಡೆಗೆ ಮತದಾರರ ಬಳಿಗೆ ನಾರೀಶಕ್ತಿ ಮತ್ತು ಮತದಾರರ ಪಟ್ಟಿ ಪರಿಶೀಲನೆ ಅಭಿಯಾನವನ್ನು ಕೆಪಿಸಿಸಿ ಮಹಿಳಾ ಘಟಕದಿಂದ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೇರವಾಗಿ ಚುನಾವಣೆಯನ್ನು ಎದುರಿಸುವುದನ್ನು ಬಿಟ್ಟು ಒಂದು ಮನೆ ಒಂದು ಮತ ಡಿಲಿಟ್ ಎಂಬ ಅಜೆಂಡಾ ಹಾಕಿಕೊಂಡಿದ್ದಾರೆ. ಇಂತಹ ನೀಚ್ ಕೃತ್ಯಕ್ಕೆ ಕೈ ಹಾಕಿದ್ದು, ಇದೊಂದು ಮನುಷ್ಯತ್ವ ಇಲ್ಲದ ಸರ್ಕಾರವಾಗಿದೆ ಎಂದು ದೂರಿದರು.
ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ, ಬೆಲೆ ಏರಿಕೆ ಹೆಚ್ಚಾಗಿದೆ. ಮಹಿಳಾ ಮೀಸಲಾತಿ ಬಗ್ಗೆ ಚಕಾರ ಎತ್ತಿಲ್ಲ. ಯುವಕ-ಯುವತಿಯರಿಗೆ ಉದ್ಯೋಗವಿಲ್ಲ. ಹಲವಾರು ವೈಫಲ್ಯಗಳನ್ನು ಬಿಜೆಪಿ ಒಳಗೊಂಡಿದೆ. ಹೀಗಾಗಿ ಮಹಿಳಾ ಕಾಂಗ್ರೆಸ್ 20 ಪ್ರಶ್ನೆಗಳನ್ನು ಇಟ್ಟುಕೊಂಡು ಬೂತಮಟ್ಟದಲ್ಲಿ ಜನರ ಬಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಮುಂಬರುವ ಚುನಾವಣೆಗಾಗಿ 85 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 18 ಜನರನ್ನು ಶಾರ್ಟ್ ಜನರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಜನವರಿಯಲ್ಲಿ ಚಿತ್ರದುರ್ಗದಲ್ಲಿ ಪಕ್ಷದ ವತಿಯಿಂದ ಬೃಹತ್ ಎಸ್.ಸಿ, ಎಸ್ ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಸಮಾವೇಶ, ಚುನಾವಣೆಯಲ್ಲಿ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಾ ಗೌರಿ, ಕೀರ್ತಿ ಮೊರೆ, ಬಾಳಪ್ಪ ಜಂಗಿನ, ಚೇತನಾ, ಜ್ಯೋತಿ, ಸುನೀತಾ ಸೇರಿದಂತೆ ಮುಂತಾದವರು ಇದ್ದರು.