hubbali

ಪೌರಕಾರ್ಮಿಕರಿಗೆ ಸೌಲಭ್ಯಗಳಿಗೆ ಶಾಸಕ ಪ್ರಸಾದ್ ಅಬ್ಬಯ್ಯ ತಡೆ ಒಡ್ಡುವ ಹುನ್ನಾರ : ವಿಜಯ ಗುಂಟ್ರಾಳ ಆರೋಪ

Share

ಪೌರಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳಿಗೆ ಅನಾವಶ್ಯಕವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ತಡೆ ಒಡ್ಡುವ ಹುನ್ನಾರ ನಡೆಸಿದ್ದಾರೆ. ನ.30 ರಂದು ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರ ಸಂಘಕ್ಕೆ ಕೊಠಡಿ ಒದಗಿಸುವ ವಿಷಯಕ್ಕೂ ಶಾಸಕರ ಕೈಗೊಂಬೆಯಾಗಿ ಪಾಲಿಕೆ ಸದಸ್ಯರು ಅಡ್ಡಿಪಡಿಸಿದರೇ ಅಂತಹ ಪಾಲಿಕೆ ಸದಸ್ಯರ ಮನೆ ಹಾಗೂ ಪೌರಕಾರ್ಮಿಕರ ಹಾಗೂ ಮಾದಿಗ ಸಮೂದಾಯದ ವಿರೋಧಿ ನೀತಿ ಹೊಂದಿರುವ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಮನೆಗೆ ಮುತ್ತಿಗೆ ಹಾಕಿ ಕಸ ಚೆಲ್ಲುವ ಹೋರಾಟ ಮಾಡಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರ ಸಂಘಕ್ಕೆ ಪಾಲಿಕೆ ಆವರಣದಲ್ಲಿ ಕೊಠಡಿಯನ್ನು ಒದಗಿಸಲು ಕಳೆದ 2009 ರಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಲಿಖಿತ ನಡಾವಳಿಗಳಲ್ಲಿ ಒಪ್ಪಿಕೊಂಡಿದ್ದಾರೆ. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಲಿಖಿತ ನಿರ್ದೇಶನ ನೀಡಿದ್ದಾರೆ. ಪಾಲಿಕೆಯ ಐದು ಜನ ಸದಸ್ಯರು ಶಿಫಾರಸ್ಸು ಪತ್ರ ನೀಡಿದ್ದಾರೆ. ಮಹಾಪೌರರು ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದಾದ ಮೇಲೆ ಆಯುಕ್ತರು ಕೊಠಡಿ ನೀಡುವ ಹಂತದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಅಡ್ಡಿಪಡಿಸಿ ಕೊಠಡಿ ನೀಡದಂತೆ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಶಾಸಕ ಪ್ರಸಾದ್ ಅಬ್ಬಯ್ಯ ಪೌರಕಾರ್ಮಿಕರ ಮಾದಿಗ ಸಮೂದಾಯಕ್ಕೆ ಮೇಲಿಂದ ಮೇಲೆ ತೊಂದರೆ ನೀಡುತ್ತಿದ್ದು, ಪೌರಕಾರ್ಮಿಕರ ಸಂಘದ ವಿರುದ್ಧ ಅನೇಕ ಸಂಘಟನೆಗಳನ್ನು ಹುಟ್ಟು ಹಾಕಿ ಎತ್ತಿಕಟ್ಟಿ ಪೌರಕಾರ್ಮಿಕರ ಸಂಘಟನೆಯನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ. ಆದರೆ ಶಾಸಕರು ಮಾತ್ರ ನಮ್ಮ ಸಂಘವನ್ನು ಒಡೆಯಲು ಕಳೆದ 10 ವರ್ಷಗಳಿಂದ ಹುನ್ನಾರ ನಡೆಸುತ್ತಲೇ ಬಂದಿದ್ದಾರೆ. ನಾಳೆ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರ ಸಂಘಕ್ಕೆ ಕೊಠಡಿ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅದು ಬಿಟ್ಟು ಶಾಸಕ ಪ್ರಸಾದ್ ಅಬ್ಬಯ್ಯ ಅವರ ಕೈಗೊಂಬೆಯಾಗಿ ಅಡ್ಡಿಪಡಿಸಿದರೇ ಅಂತಹ ಪಾಲಿಕೆ ಸದಸ್ಯರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೊಟಬಾಗಿ, ದತ್ತಪ್ಪ ಆಪುಸಪೇಟ, ಲಕ್ಷ್ಮೀ ಬೇತಾಪಲ್ಲಿ ಸೇರಿದಂತೆ ಮುಂತಾದವರು ಇದ್ದರು.

Tags: