Gokak

ನಾರಾಯಣ ಗುರುಗಳಿಗೆ ಕೇಂದ್ರದಿಂದ ಅಪಮಾನ: ಗೋಕಾಕ್‍ನಲ್ಲಿ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪ್ರತಿಭಟನೆ

Share

ಕೇರಳದ ನಾರಾಯಣ ಗುರುಗಳ ಕ್ರಾಂತಿ ಮನುಕುಲ ಎಂದೂ ಮರೆಯಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯ ಸ್ಥಬ್ಧಚಿತ್ರವನ್ನು ಕೇಂದ್ರ ಸರ್ಕಾರ ನಿರಾಕರಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಿಡಿಕಾರಿದರು.

ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಾರಾಯಣ ಗುರುಗಳ ಸ್ಥಬ್ಧಚಿತ್ರ ಪ್ರದರ್ಶನ ತಿರಸ್ಕರಿಸಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಗೋಕಾಕ್‍ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೋರ್ಟ ಸರ್ಕಲ್‍ನಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಸತೀಶ ಜಾರಕಿಹೊಳಿ ಬ್ರಹ್ಮಶ್ರೀ ನಾರಾಯಣ ಗುರುಗಳು ಈ ದೇಶ ಕಂಡ ಅಪ್ರತಿಮ ಗುರುಗಳು. ಅವರ ಸಂದೇಶ, ತತ್ವ ಇಂದಿಗೂ ಪ್ರಸ್ತುತ. ಸರ್ವ ಸಮಾನತೆ ಸಾರಿದ ನಾರಾಯಣ ಗುರುಗಳಿಗೆ ಕೇಂದ್ರ ಅವಮಾನಿಸಿರುವುದು ದೇಶದ ಜನರಿಗೆ ನೋವುಂಟು ಮಾಡಿದೆ. ಇದೊಂದು ರಾಷ್ಟ್ರೀಯ ಅವಮಾನವಾಗಿದೆ. ಅದೇ ರೀತಿ ಸ್ವಾತಂತ್ರ್ಯ ಹೋರಾಟ ಮಾಡಿದ ಸುಭಾಶಚಂದ್ರ ಬೋಸ್, ತಮಿಳುನಾಡು ಸರ್ಕಾರದಿಂದ ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಸ್ಥಬ್ಧ ಚಿತ್ರಗಳನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾನವ ಬಂಧುತ್ವ ವೇದಿಕೆ, ವಿದ್ಯಾರ್ಥಿ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳು, ಈಡಿಗ ಆರ್ಯ ಸಂಘಟನೆ, ಪ್ರಗತಿಪರ ಚಿಂತಕರು, ಕಲಾಲ್ ಸಮಾಜ, ಕುರುಬ ಸಂಘಟನೆ, ಸಾಹಿತಿಗಳು ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಸಾಥ್ ನೀಡಿದವು. ಕೋರ್ಟ್ ಸರ್ಕಲ್‍ನಿಂದ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ರಾಜ್ಯ ಕುರುಬ ಸಂಘಟನೆ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ ಸೇರಿದಂತೆ ಇನ್ನಿತರ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Tags: