ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ ಬರೀ ಸುಳ್ಳು ಭರವಸೆ ಕೊಡುತ್ತಿದೆ. ಒಂದು ಕಡೆ ಪ್ರವಾಹ ಬಂದಿದೆ, ಕೋವಿಡ್ ಬಿಕ್ಕಟ್ಟು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಬಣ್ಣ ಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳುತ್ತಿದ್ದಾರೆ. ಜಾಹೀರಾತಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಬಂದು ಎರಡೂವರೇ ವರ್ಷ ಆಗಿದೆ. ಬೊಮ್ಮಾಯಿ ಸರ್ಕಾರ ಯಡಿಯೂರಪ್ಪ ಸರ್ಕಾರದ ಮುಂದುವರಿದ ಸರ್ಕಾರ ಆಗಿದೆ. ಇದು ಹೊಸ ಸರ್ಕಾರ ಏನೂ ಅಲ್ಲ. ಆ ಸರ್ಕಾರದಲ್ಲಿ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದರು. ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಈ ಕೈಪಿಡಿಯಲ್ಲಿ ಇವರು ಮೆನ್ಷನ್ ಮಾಡಿಲ್ಲ. ಇನ್ನು 2018ರ ಬಿಜೆಪಿ ಪ್ರಣಾಳಿಕೆ ಬೊಮ್ಮಾಯಿ ಸರ್ಕಾರ ಮತ್ತು ಯಡಿಯೂರಪ್ಪ ಸರ್ಕಾರ ಎರಡಕ್ಕೂ ಕೂಡ ಅನ್ವಯಿಸುತ್ತದೆ. ಜುಲೈನಿಂದ ಡಿಸೆಂಬರ್ವರೆಗೆ ನೀರಾವರಿಗೋಸ್ಕರ 6300 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಕೈಪಿಡಿಯಲ್ಲಿ ತಿಳಿಸಿದ್ದಾರೆ. ಬಹಳ ಸುಂದರವಾದ ಪುಸ್ತಕವನ್ನಂತೂ ಬಿಡುಗಡೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಐದು ವರ್ಷದಲ್ಲಿ ಒಂದೂವರೇ ವರ್ಷ ಲಕ್ಷ ಕೋಟಿ ನೀರಾವರಿಗೋಸ್ಕರ ಖರ್ಚು ಮಾಡುತ್ತೇವೆ ಎಂದಿದ್ದರು. ಅಂದರೆ ಪ್ರತಿ ವರ್ಷ ಕನಿಷ್ಠ 30 ಸಾವಿರ ಕೋಟಿ ಖರ್ಚು ಮಾಡಬೇಕಾಗುತ್ತದೆ. ಆದರೆ ಇವರು ಖರ್ಚು ಮಾಡಿದ್ದು ಮಾತ್ರ 6300 ಕೋಟಿ ರೂಪಾಯಿ ಮಾತ್ರ. ಈ ಪುಸ್ತಕದಲ್ಲಿ ಸಾಧನೆಗಳಿಗಿಂತ ಭರವಸೆಗಳೇ ಜಾಸ್ತಿಯಿವೆ. ಮುಂದಿನ ಮೂರು ವರ್ಷದಲ್ಲಿ ಬೆಂಗಳೂರಿಗೆ 6 ಸಾವಿರ ಕೋಟಿ ಖರ್ಚು ಮಾಡುತ್ತೇವೆ, 5 ಲಕ್ಷ ಮನೆಗಳನ್ನು ಕಟ್ಟುತ್ತೇವೆ, ಅಮೃತ ಯೋಜನೆಯಲ್ಲಿ 750 ಶಾಲೆಗಳಿಗೆ 10 ಲಕ್ಷ ಖರ್ಚು ಮಾಡುತ್ತೇವೆ, 25 ಆಸ್ಪತ್ರೆಗಳಿಗೆ 25 ಲಕ್ಷ ಖರ್ಚು ಮಾಡಿ ಮೇಲ್ದರ್ಜೆಗೇರಿಸುತ್ತೇವೆ, ಅಮೃತ ಗ್ರಾಮಗಳನ್ನು ಮಾಡುತ್ತೇವೆ ಎಂದಿದ್ದಾರೆ. ಹಳೆ ಕಾರ್ಯಕ್ರಮಗಳಿಗೆ ಹೊಸ ಹೆಸರು ಇಟ್ಟಿದ್ದಾರೆ. ಎಚ್.ಕೆ.ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಸೇವಾ ಕೇಂದ್ರ ಅಂತಾ ಮಾಡಿದ್ದರು, ಇದೀಗ ಇವರು ಗ್ರಾಮ್ ಒನ್ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಇದಕ್ಕೆ ಸಾಧನೆ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಇನ್ನು ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದಿದ್ದಾರೆ. ಇವರು ಕೊಟ್ಟಿದ್ದು 1 ಸಾವಿರ ಚಿಲ್ಲರೆ ಕೋಟಿ ಅನುದಾನದಲ್ಲಿ ಕ್ರಿಯಾ ಯೋಜನೆ ಜಾರಿಗೊಳಿಸಿದ್ದಾರೆ. ಇನ್ನು ಫೆಬ್ರವರಿ ಮಾರ್ಚ ಉಳಿದಿದೆ, ಆದರೆ ಇನ್ನೆಷ್ಟು ಇವರು ಖರ್ಚು ಮಾಡುತ್ತಾರೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಕೊರೊನಾದಲ್ಲಿ ಬಹಳ ನಿರೋದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ಸಿಆರ್ಬಿ ವರದಿ ಪ್ರಕಾರ 1 ಲಕ್ಷ 53 ಸಾವಿರ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014-15ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕಿಂತ ಡಬಲ್ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಶೇ.60ರಷ್ಟು ಸಣ್ಣ, ಮಧ್ಯಮ ಕೈಗಾರಿಕೆಗಳು, ಕುಲಕಸಬುಗಳು ಮುಚ್ಚಿಕೊಂಡು ಹೋದವು. ಪರಿಹಾರ ಕೊಡುತ್ತೇವೆ ಎಂದರೂ ಏನೂ ಕೊಡಲಿಲ್ಲ ಎಂದು ವಾಗ್ದಾಳಿ ಮಾಡಿದರು.

