ಅದು ರಾಜ್ಯದಲ್ಲಿಯೇ ದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದಿದೆ, ಆದರೂ ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಿ ಮೇಯರ್, ಉಪಮೇಯರ್ ಆಯ್ಕೆ ಮಾಡುವಂತೆ ನಿರ್ದೇಶನ ನೀಡಿದೆ. ಮೀಸಲಾತಿ ಘೋಷಣೆ ಆಗುತ್ತಿದಂತೆ ಆಕಾಂಕ್ಷಿಗಳೆ ದಂಡೆ ಹುಟ್ಟಿಕೊಂಡಿದೆ. ಇದರಿಂದ ಬಿಜೆಪಿಯ ನಾಯಕರಿಗೆ ಮೊದಲ ಪ್ರಜೆ ಆಯ್ಕೆ ದೊಡ್ಡ ತಲೆನೋವಾಗಿದೆ..
ಹೌದು..ಮೀಸಲಾತಿ ಗೊಂದಲದಿಂದ ಅವಳಿ ನಗರದ ಚುನಾವಣೆ ನಡೆದು ಪಾಲಿಕೆಗೆ ಸದಸ್ಯರು ಆಯ್ಕೆ ಆದರೂ ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮೀಸಲಾತಿ ಗೊಂದಲ ನಿವಾರಿಸಿ ಮೇಯರ್, ಉಪಮೇಯರ್ ಆಯ್ಕೆ ಮಾಡಲು ಸೂಚಿಸಿದೆ. ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನ 21 ನೇ ಅವಧಿಗೆ ಸಂಭಂದಿಸಿದ ಮೀಸಲಾತಿಯನ್ವಯ ನಡೆಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಮೇಯರ್, ಉಪಮೇಯರ್ ಚುನಾವಣೆಯನ್ನ 21 ನೇ ಅವಧಿ ಮೀಸಲಾತಿ ನಡೆಸಬೇಕೋ ಅಥವಾ 23 ನೇ ಅವಧಿಯ ಮೀಸಲಾತಿಗೆ ಸಂಬಂಧಿಸಿದಂತೆ ಎಂಬ ಗೊಂದಲ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಸೃಷ್ಟೀಕರಣ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಈಗ ರಾಜ್ಯ ಸರ್ಕಾರ ಈ ಗೊಂದಲಕ್ಕೆ ತೆರೆ ಎಳೆದಿದೆ. ಮೀಸಲಾತಿ ನೀಗದಿಗೊಳ್ಳುತ್ತಿದಂತೆಯೇ ಬಿಜೆಪಿಯ ಆಕಾಂಕ್ಷಿಗಳು ಮೇಯರ್, ಉಪಮೇಯರ್ ಗೌನ್ ಧರಿಸಲು ತೆರೆಮರೆಯ ರಾಜಕೀಯ ಚುರುಕುಗೊಳಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ. ಸತತ ನಾಲ್ಕನೇ ಬಾರಿ ಪಾಲಿಕೆ ಸದಸ್ಯರಾಗಿರೋ ಮಾಜಿ ಮೇಯರ್ ವೀರಣ್ಣ ಸವಡಿ ಮೇಯರ್ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಚಂದ್ರಶೇಖರ ಮನಗುಂಡಿ ಸೇರಿದಂತೆ ಜೆಡಿಎಸ್ನಿಂದ ಬಿಜೆಪಿಗೆ ವಲಸೆ ಬಂದಿರುವ ರಾಜಣ್ಣ ಕೊರವಿ ಮೇಯರ್ ಸ್ಥಾನದ ರೇಸ್ನಲ್ಲಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಉಮಾ ಮುಕುಂದ, ರೂಪಾ ಶೆಟ್ಟಿ, ಮೀನಾಕ್ಷಿ ಒಂಟಮೂರಿ ಹೆಸರು ಕೇಳಿ ಬರುತ್ತಿದೆ.
ಇನ್ನೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ ನೋಡುವುದಾದ್ರೆ ಒಟ್ಟು 82 ವಾರ್ಡ್ಗಳಿವೆ. ಇದರಲ್ಲಿ ಬಿಜೆಪಿ 39 ಸ್ಥಾನ ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ 33 ಐಐಎಂಐಎಂ 3, ಜೆಡಿಎಸ್ 1, ಪಕ್ಷೇತರರು 6 ವಾರ್ಡ್ಗಳಲ್ಲಿ ಜಯ ಗಳಿಸಿದ್ದಾರೆ. ಇದರಿಂದ ಮಹಾನಗರ ಪಾಲಿಕೆಯ ಗದ್ದುಗೆ ಏರುವುದು ಬಿಜೆಪಿಯೇ ಪಕ್ಕಾ ಆಗಿದೆ. ಈಗ ಪ್ರಾದೇಶಿಕ ಆಯುಕ್ತರು ಚುನಾವಣೆ ದಿನಾಂಕ ಪ್ರಕಟಿಸಿವುದು ಮಾತ್ರ ಬಾಕಿ ಇದೆ. ಚುನಾವಣೆ ಘೋಷಣೆ ಮುನ್ನವೆ ಮೇಯರ್ ಸ್ಥಾನದ ಆಕಾಂಕ್ಷೆಗಳು ಒಳಗಿಂದೊಳಗೆ ಪೈಪೋಟಿ ನಡೆಸಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ ಬೆಂಬಲಿಗರಿಂದ ಈಗಾಗಲೇ ಲಾಭಿ ಆರಂಭವಾಗಿದೆ. ಮಹಾನಗರ ಪಾಲಿಕೆಯ ಗದ್ದುಗೆ ಯಾರ ಪಾಲಾಗುತ್ತದೆ. ಇಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆಂಬುದಕ್ಕೆ ಇನ್ನೂ ಒಂದು ತಿಂಗಾಳವಾದ್ರೂ ಕಾಯಲೇಬೇಕಿದೆ..