Uncategorized

ಕಾಂಗ್ರೆಸ್‍ಗಿಂತ ಬಿಜೆಪಿ ಅತೀ ನಾಚಿಕೆಗೇಡಿತನದಿಂದ ವರ್ತಿಸುತ್ತಿದೆ: ಎಸ್.ಆರ್.ಹಿರೇಮಠ ವಾಗ್ದಾಳಿ

Share

ಬಿಜೆಪಿ ಸರ್ಕಾರ ಇದನ್ನು ಮಾಡುತ್ತಿದೆ ಎಂಬ ಭ್ರಮೆಯಲ್ಲಿದ್ದರೆ ಅದು ಸರಿಯಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಹಾಸು ಹೊಕ್ಕಾಗಿವೆ. ಅವರೇ ಇವರಿಗೆ ಭೂಮಿ ಸಿದ್ಧಪಡಿಸಿಕೊಟ್ಟಿದ್ದಾರೆ. ಇವರು ಅವರಿಗಿಂತ ಅತೀ ನಾಚಿಕೆಗೇಡಿತನದಿಂದ ಹದ್ದು ಮೀರಿ ಅದನ್ನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಕಿಡಿಕಾರಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಕೇಂದ್ರ ಸರ್ಕಾರ ಐತಿಹಾಸಿಕ ರೈತ ಚಳುವಳಿ ಒತ್ತಡದಿಂದ ಅದಕ್ಕೂ ಹೆಚ್ಚು ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಅದರ ಪರಿಣಾಮದಿಂದ ಹೆದರಿ ಮೂರು ಕರಾಳ ಕೃಷಿ ಕಾನೂನುಗಳನ್ನು ವಾಪಸ್ಸು ಪಡೆದುಕೊಂಡಿದೆ. ಇನ್ನು 2012ರಲ್ಲಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಸುಮ್ಮನೆ ಬಾಯಿ ಮಾತಿನ ಭರವಸೆ ಬೇಡ, ಕಾನೂನಾತ್ಮಕವಾಗಿ ಎಂಎಸ್‍ಪಿ ಜಾರಿಗೆ ತನ್ನಿ ಎಂದು ಆಗ್ರಹಿಸಿದ್ದರು. ಆದರೆ ಇಂದು ಅವರೇ ಪ್ರಧಾನಿ ಆಗಿದ್ದಾರೆ, ಸುಪ್ರೀಂಕೋರ್ಟ ಮುಂದೆ ಇವರೇ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಲು ನಮ್ಮಲ್ಲಿ ಶಕ್ತಿ ಇಲ್ಲ ಎಂದು ಹೇಳುತ್ತಿರುವುದು ಎಷ್ಟು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿಗಳನ್ನು ರದ್ದು ಪಡಿಸಿದ್ರೂ ಕೂಡ ರಾಜ್ಯ ಸರ್ಕಾರ ಮಾಡುತ್ತಿಲ್ಲ. ಅಹಿಂಸಾತ್ಮಕ ಸತ್ಯದ ಆಧಾರದ ಮೇಲೆ ಸಮಗ್ರವಾಗಿ ಹೋರಾಟ ಮಾಡುವುದು ಒಂದೇ ಪರಿಹಾರ. 2003ರಲ್ಲಿ ಅಂದಿನ ಅಟಲ್ ಬಿಹಾರಿ ಪ್ರಧಾನಮಂತ್ರಿ ಆಗಿದ್ದಾಗ 1991ರ ಹೊಸ ಆರ್ಥಿಕ ನೀತಿಯನ್ನು ಆಧಾರವಾಗಿ ಇಟ್ಟುಕೊಂಡು ವಿಶ್ವ ಮಾರುಕಟ್ಟೆಗಳನ್ನು ರೈತರಿಗೆ ಅವಕಾಶ ಕೊಡುವ ಸಲುವಾಗಿ ಎಂದು ಮಾಡಲ್ ಆಕ್ಟ 2003 ಮಾಡಿದ್ದಾರೆ. ಇದನ್ನೇ ನಮ್ಮ ಸರ್ಕಾರ ಫಾಲೋ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.

ಇನ್ನು 2008ರಲ್ಲಿ ಕೇಂದ್ರ ಸರ್ಕಾರದ ಪ್ರಚೋದನೆಯಿಂದ ಇವು ಮುಂದುವರಿದಿವೆ. 2007-8ರಲ್ಲಿ ಕರ್ನಾಟಕದಲ್ಲಿ 1996 ಎಪಿಎಂಸಿ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತಂದಿದ್ದಾರೆ. ಈಗ ಬಿಜೆಪಿ ಸರ್ಕಾರವನ್ನು ವಿರೋಧಿಸುತ್ತಿರುವ ಮಹಾ ಭೂಪರು, ಸಿದ್ದರಾಮಯ್ಯ ಅವರು ಸೇರಿದಂತೆ ಇನ್ನಿತರರು ಸಿದ್ದರಾಮಯ್ಯ ಅವರ ಆಡಳಿತದಲ್ಲಿಯೇ 2014ರಲ್ಲಿ ಅಧಿಸೂಚನೆ ಹೊರಡಿಸಿ, 2017ರಲ್ಲಿ ತಿದ್ದುಪಡಿ ಮಾಡಿದ್ದಾರೆ. ಇಲ್ಲಿ ಕರಿಗೌಡ ಅಲ್ಲ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇವರು ಜವಾಬ್ದಾರಿಯಾಗಿದ್ದಾರೆ. ವಿಶೇಷವಾಗಿ ಇವರಿಗೆ ನಾವು ಟಾರ್ಗೆಟ್ ಮಾಡಲೇಬೇಕಾಗುತ್ತದೆ. 2017ರ ತಿದ್ದುಪಡಿಯ ಪ್ರಕಾರ ಎಪಿಎಂಸಿ ಮೇಲೆ ಸರ್ಕಾರದ ನಿಯಂತ್ರಣ ಮಾಡಲು ಅಧಿಕಾರ ಇತ್ತು. ಆದರೆ ಈ 2020ರ ತಿದ್ದುಪಡಿ ಕಾಯ್ದೆ ಪ್ರಕಾರ ಲಂಗು ಲಗಾಮು ಇಲ್ಲದಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಕಳೆದ ಜುಲೈನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಯಾವಾಗ ಸಂಸತ್ತ ಅಧಿವೇಶನ ಬರೋದಿಲ್ಲ, ಯಾವಾಗ ತುರ್ತು ಪರಿಸ್ಥಿತಿ ಇರುತ್ತದೆಯೋ ಆಗ ಸುಗ್ರೀವಾಜ್ಞೆ ಹೊರಡಿಸಬೇಕು. ಇವರ ಕಾರ್ಯ ಪದ್ಧತಿ ನೋಡಿದರೆ ದೇಶದ ಜನತೆಯ ಹಿತವನ್ನು ಸಂವಿಧಾನದ ಚೌಕಟ್ಟಿನಲ್ಲಿ ಎತ್ತಿ ಹಿಡಿಯುವ ಬದಲಾಗಿ ದೇಶದ ಜನರಿಗೆ ಮೋಸ ಮಾಡಿ ಯಾವುದೇ ಆಧಾರ ಇಲ್ಲದೇ ಸುಗ್ರೀವಾಜ್ಞೆಯನ್ನು ತಂದಿದ್ದಾರೆ. ಪಾರದರ್ಶಕ, ಉತ್ತರದಾಯಿತ್ವ ಇರುವ ಸರ್ಕಾರಗಳು ಇಂದು ಇಲ್ಲ.

ಸಾರ್ವಜನಿಕ ಜೀವನದಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಜನಹಿತ ಮಾಡಬೇಕು ಎನ್ನುವ ಬದಲು ಸ್ವಾರ್ಥ, ಭೂಕಬಳಿಕೆ, ಮಾಡಬಾರದ ಅಪರಾಧಗಳು, ಶೇ.20ರಷ್ಟಿದ್ದ ಕ್ರಿಮಿನಾಲಿಟಿ ಶೇ.40ರಷ್ಟಾಗಿದೆ. ಹಿಂದೆ ಬಳ್ಳಾರಿಯಲ್ಲಿ ರೆಡ್ಡಿಗಳ ವಿರುದ್ಧ ಹೋರಾಟ ಮಾಡಿದ್ದೇವು. ಜಸ್ಟಿಸ್ ಸಂತೋಷ ಹೆಗಡೆ ಅವರು ವರದಿ ಕೊಟ್ಟರು, ಪ್ರಶಾಂತ ಭೂಷಣ ಅವರು ಒಂದು ಪೈಸೆ ತೆಗೆದುಕೊಳ್ಳದೇ ಎಲ್ಲರೂ ಹೋರಾಟ ಮಾಡಿದ್ದೇವು. ಬ್ರಿಟಿಷ ಸಾಮ್ರಾಜ್ಯದ ವಿರುದ್ಧ ನಿರ್ಣಾಯಕ ಶಪಥವನ್ನು ಮತ್ತೆ ನೆನಪಿಸಿಕೊಂಡು ಈಗಿನ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

Tags: