ಪ್ರಿಯ ರಿಷಭ್,
ಕತೆಗಾರ ಯಾವತ್ತೂ ತನ್ನೂರಿನ ಮತ್ತು ತನ್ನ ಕಾಲದ ಕತೆಗಳನ್ನು ಹೇಳಬೇಕು. ಆಗಲೇ ಆ ಕತೆಗಳು ನಮಗೆ ಆಪ್ತವಾಗುತ್ತವೆ. ಕತೆಗಳಲ್ಲಿ ಕಾಲ್ಪನಿಕತೆ ಇರಬೇಕು ನಿಜ, ಆದರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತನ್ನ ಅನುಭವ ಹೆಪ್ಪುಗಟ್ಟಿರಬೇಕು.
ಈಗ ನೀವು ಹೇಳಿರುವುದು ಅಂಥದ್ದೊಂದು ಕತೆಯನ್ನು. ಕಾಂತಾರ ನಾನು ಕಂಡಿರುವ ಜಗತ್ತು. ಅದು ಇಲ್ಲಿಯ ತನಕ ನಾನು ಕೇಳಿದ ಕತೆಗಳಲ್ಲಿತ್ತು. ನನ್ನ ಒಳಗಣ್ಣಿನ ಎದುರು ಇತ್ತು. ಇದ್ದಕ್ಕಿದ್ದಂತೆ ಮಾಯವಾಗುವ ಪಂಜುರ್ಲಿ, ಕ್ಷೇತ್ರಪಾಲ ಗುಳಿಗ, ರಕ್ತಕಾರಿ ಸಾಯುವಂತೆ ಮಾಡುವ ಕಲ್ಲುರ್ಟಿ- ದೈವಭೂತಗಳು ನಮ್ಮ ದಿನಚರಿಯ ಒಂದು ಭಾಗ. ನಮ್ಮ ಕಡೆ ಸಿಕ್ಕಾಪಟ್ಟೆ ತಿನ್ನುವವನನ್ನು ಗುಳಿಗ ಎಂದು ಕರೆಯುತ್ತೇವೆ.
ನಮ್ಮ ಕುಲದೈವ ಜುಮಾದಿ. ಅದರ ನೂರೆಂಟು ಸಾಹಸಗಳನ್ನು ನಾನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇನೆ. ಆ ಕತೆಗಳೆಲ್ಲ ಫ್ಯಾಂಟಸಿಯೂ ಹೌದು, ಕತೆಯೂ ಹೌದು, ಸತ್ಯವೂ ಹೌದು. ಅದು ನಮಗಷ್ಟೇ ಗೊತ್ತಿರುವ ನಮ್ಮ ಸತ್ಯ, ನಮ್ಮ ದೈವದ ಸತ್ಯ. ಅದನ್ನೆಲ್ಲ ತೆರೆಯ ಮೇಲೆ ತರುವುದು ಕಷ್ಟದ ಕೆಲಸ. ನೀವು ಅದನ್ನು ಸಮರ್ಥವಾಗಿ ಮಾಡಿದ್ದೀರಿ.
ಎಲ್ಲಕ್ಕಿಂತ ಮುಖ್ಯವಾಗಿ ನೀವು ನನ್ನ ದಕ್ಷಿಣ ಕನ್ನಡದ ನೆಲದ ಒಂದು ಭಾಗವನ್ನು ಕತ್ತರಿಸಿ ತಂದು ನಮ್ಮ ಮುಂದಿಟ್ಟಿದ್ದೀರಿ. ಹೀಗಾಗಿ ಇದು ಮಾಡಿದ ಚಿತ್ರವಲ್ಲ, ಮೂಡಿದ ಚಿತ್ರ. ಒಂದು ಗಂಭೀರವಾದ ಹೋರಾಟದ ಚಿತ್ರದ ನಡುವೆಯೂ ನೀವು ತಿಳಿಹಾಸ್ಯವನ್ನು ಮರೆತಿಲ್ಲ. ಯಾವ ಪಾತ್ರ ಕೂಡ ಬೇರೆ ಎಲ್ಲಿಂದಲೋ ಬಂದದ್ದು ಅನ್ನಿಸುವುದಿಲ್ಲ.
ನಿಮ್ಮ ಕಾಂತಾರವನ್ನು ಸಾಕ್ಷಾತ್ಕಾರಗೊಳಿಸುವಲ್ಲಿ ನಿಮ್ಮ ಛಾಯಾಗ್ರಾಹಕರಾದ ಅರವಿಂದ್ ಕಶ್ಯಪ್ ಮತ್ತು ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಅವರ ಪಾತ್ರವೂ ದೊಡ್ಡದಿದೆ. ಈ ಚಿತ್ರದ ಕಲಾನಿರ್ದೇಶಕರಿಗೂ ವಿಶೇಷ ಗೌರವ ಸಲ್ಲಬೇಕು. ಕಲಾವಿದರನ್ನು ನೀವು ಅದೆಲ್ಲಿಂದ ಹುಡುಕ್ತೀರಪ್ಪ. ಎಲ್ಲರಿಗೂ ಚಪ್ಪಾಳೆ.
ಇಂಥ, ಚಿತ್ರಗಳು, ನಮ್ಮ ಜಗತ್ತನ್ನು ಶ್ರೀಮಂತಗೊಳಿಸುತ್ತವೆ. ಈ ಸಿನಿಮಾ ನೋಡಿದ ನಂತರ ನೀವು ನನಗೆ ಕನ್ನಡದ Mel Gibson-ಮೆಲ್ ಗಿಬ್ಸನ್ ಥರ ಕಂಡಿರಿ. ನಿಮಗೆ ಅಭಿನಂದನೆ.
~ಜೋಗಿ
(ಕಾಂತಾರ ಬಿಡುಗಡೆಯಾಗಿ ವರುಷ. ಅಂದು ಬರೆದ ನಾಕು ಮಾತು ಇವು)