Dr Bro in Star Sports: ಈ ಬಗ್ಗೆ ಮಾಹಿತಿ ಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಡಾ. ಬ್ರೋ ಚೆನ್ನೈಗೆ ಆಗಮಿಸಿ ಪಂದ್ಯ ನಡೆಯಲಿರುವ ಎಂದ ಚಿದಂಬರಂ ಕ್ರೀಡಾಂಗಣಕ್ಕೆ ಆಟೋದಲ್ಲಿ ಬರುವ ವಿಡಿಯೋವನ್ನು ಹಂಚಿಕೊಂಡಿದೆ.
- ಬಿಗ್‍ಬಾಸ್’ ಮನೆಗೆ ಹೋಗದ ಡಾ. ಬ್ರೋ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ದರ್ಶನ
- ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ಕ್ರಿಕೆಟ್ ಕಾಮೆಂಟರಿ ನೀಡಲಿರುವ ಡಾ. ಬ್ರೋ
- ಇನ್ಮೇಲೆ ಟೀಂ ಇಂಡಿಯಾದ ಎಲ್ಲಾ ಅಪ್ಡೇಟ್ಸ್ ಕೊಡ್ತಾರಂತೆ ಡಾಕ್ಟರ್ ಬ್ರೋ
ಬೆಂಗಳೂರು: ನಮಸ್ಕಾರ ದೇವ್ರು… ಎಂದಕೂಡಲೇ ನಮಗೆಲ್ಲರಿಗೂ ನೆನಪಾಗುವುದೇ ಡಾ. ಬ್ರೋ.. ಸಾಧಿಸುವ ಛಲವಿದ್ದರೆ ಸಾಕು ಏನೂ ಬೇಕಾದರೂ ಮಾಡಬಹುದು ಅನ್ನೋದಕ್ಕೆ ಈ ಡಾ. ಬ್ರೋ ಸಾಕ್ಷಿ. ಯೂಟ್ಯೂಬರ್ ಆಗಿ ಲಕ್ಷಾಂತರ ಜನರ ಅಭಿಮಾನ ಸಂಪಾದಿಸಿರುವ ಡಾ. ಬ್ರೋ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾಗಿದ್ದಾರೆ.
ಕೇವಲ 22ರ ಹರೆಯದ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ. ಬ್ರೋ ದೇಶ-ವಿದೇಶ ಸುತ್ತುತ್ತಾ ಕನ್ನಡದಲ್ಲಿಯೇ ಅಲ್ಲಿನ ಮಾಹಿತಿ ನೀಡುತ್ತಾ ಕನ್ನಡಿಗರಿಗೆ ಅದ್ಭುತ ಮಾಹಿತಿ ನೀಡುತ್ತಿದ್ದಾರೆ. ಅಂಗೈನಲ್ಲಿಯೇ ಕನ್ನಡಿಗರಿಗೆ ಇಡೀ ಪ್ರಪಂಚವನ್ನೇ ಪರಿಚಯಿಸುತ್ತಿರುವ ಡಾ. ಬ್ರೋ ಈ ಬಾರಿ ‘ಬಿಗ್‍ಬಾಸ್’ ಮನೆಗೆ ಪ್ರವೇಶಿಸುತ್ತಾರೆ ಅಂತಾ ಗುಲ್ಲು ಎದ್ದಿತ್ತು. ಕೆಲವರು ಡಾ. ಬ್ರೋ ‘ಬಿಗ್‍ಬಾಸ್’ ಮನೆಗೆ ಬರಬೇಕು ಅಂದರೆ, ಇನ್ನೂ ಕೆಲವರು ಅಲ್ಲಿಗೆ ಹೋಗುವುದ ಬೇಡ ಅಂತಾ ಹೇಳುತ್ತಿದ್ದಾರೆ.
ಇದೆಲ್ಲದರ ನಡುವೆ ಡಾ. ಬ್ರೋ ಫ್ಯಾನ್ಸ್‍ಗೆ ಖುಷಿ ಸುದ್ದಿ ಸಿಕ್ಕಿದೆ. ಡಾ. ಬ್ರೋ ‘ಬಿಗ್‍ಬಾಸ್’ ಮನೆಗೆ ಹೋಗುವುದಿಲ್ಲ. ಆದರೆ ಅವರು ಕ್ರಿಕೆಟ್ ಕಾಮೆಂಟರಿ ಮಾಡಲಿದ್ದಾರೆ. ಹೌದು, ಡಾ.ಬ್ರೋ ‘ಬಿಗ್‍ಬಾಸ್’ ಮನೆಗೆ ಹೋಗುವ ಬದಲು ಅವರು ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್‍ನಲ್ಲಿ ಅವರು ಕ್ರಿಕೆಟ್ ಕಾಮೆಂಟರಿ ನೀಡಲಿದ್ದಾರೆ.
ಈ ಬಗ್ಗೆ ಸ್ವತಃ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ನಾಳೆ ಅಂದರೆ ಭಾನುವಾರ(ಅಕ್ಟೋಬರ್ 7) ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯವಿದು. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹೊಂದಿದೆ. ಕನ್ನಡಲ್ಲಿಯೂ ಈ ಪಂದ್ಯದ ಕಾಮೆಂಟರಿ ಪ್ರಸಾರವಾಗಲಿದೆ. ಇದರಲ್ಲಿ ಡಾ. ಬ್ರೋ ಕೂಡ ಕಾಣಿಸಿಕೊಂಡು ಕ್ರಿಕೆಟ್ ಕಾಮೆಂಟರಿ ನೀಡಲಿದ್ದಾರೆ.