ಬಿಗ್ ಬಾಸ್ ಮನೆಯಲ್ಲಿ ಆಟಕ್ಕಿಂತಲೂ ನೋಟವೇ ಜಾಸ್ತಿಯಾಗಿದೆ. ಆ ನೋಟ ಈಗ ಪ್ರೀತಿ ಪ್ರೇಮವಾಗಿ ಬದಲಾಗುತ್ತದೆ. ಈ ಪ್ರೀತಿ ಪ್ರೇಮ ಎಷ್ಟು ದಿನಗಳ ಕಾಲ ಇರತ್ತೋ ಗೊತ್ತಿಲ್ಲ. ಆದರೆ, ನೋಡುಗರಿಗೆ ಮನರಂಜನೆಯನ್ನಂತೂ ಪಕ್ಕಾ ನೀಡುತ್ತದೆ. ಬಿಗ್ ಬಾಸ್ ಮನೆಯಲ್ಲಿ ಜೋಡಿಯಾದ ಹಕ್ಕಿಗಳು ಮನೆಯಿಂದ ಆಚೆ ಬಂದಾಗ ಮತ್ತೆ ಒಟ್ಟಾಗಿ ರೆಕ್ಕೆ ಬಿಚ್ಚಿದ್ದು ಕಡಿಮೆ. ಮದುವೆ ಆಗಿದ್ದು ಇನ್ನೂ ಕಡಿಮೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಕೇಳಿ ಬರುತ್ತಿರುವ ಪ್ರಣಯ ಪಕ್ಷಿಗಳ ಹೆಸರು ಮೈಕಲ್ ಮತ್ತು ಇಶಾನಿ ಅವರದ್ದು. ಇಬ್ಬರೂ ಮೂಲತಃ ಕರ್ನಾಟಕದವರೇ ಆಗಿದ್ದರೂ, ಹುಟ್ಟಿ ಬೆಳದದ್ದು ಬೇರೆ ಬೇರೆ ಕಡೆ. ಮೈಕಲ್ ನೈಜಿರಿಯಾದಲ್ಲಿ ಬೆಳೆದಿದ್ದರೆ, ಇಶಾನಿ ದುಬೈ ಹಾಗೂ ಇತರ ದೇಶಗಳಲ್ಲಿ ಬೆಳೆದಿದ್ದಾರೆ. ಆದರೂ, ಇಬ್ಬರಿಗೂ ಚೆನ್ನಾಗಿ ಕನ್ನಡ ಬರುತ್ತೆ. ಹಾಗಾಗಿಯೇ ಇಬ್ಬರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇಶಾನಿ ಜೀವನದಲ್ಲಿ ಒಂದಷ್ಟು ಫ್ಲ್ಯಾಶ್ ಬ್ಯಾಕ್ ಇವೆ. ಮೈಕಲ್ ಜೀವನವೂ ಅಷ್ಟೊಂದು ಸರಳವಾಗಿರಲಿಲ್ಲ. ಅದೆಲ್ಲವನ್ನೂ ಬಿಗ್ ಬಾಸ್ ವೇದಿಕೆಯ ಮೇಲೆ ಇಬ್ಬರೂ ಹಂಚಿಕೊಂಡು ಆಗಿದೆ. ಹಾಗಾಗಿಯೇ ಈ ಜೋಡಿಯ ಮೇಲೆ ನೋಡುಗರಿಗೆ ವಿಶೇಷ ಅಭಿಮಾನವಿದೆ. ಇಬ್ಬರೂ ಜೊತೆಯಾದಾಗೆಲ್ಲ, ಹೀಗೆ ಖುಷಿ ಖುಷಿಯಾಗಿರಲಿ ಎಂದು ನೋಡುಗರು ಹಾರೈಸುತ್ತಾರೆ. ಈ ಜೋಡಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಲವ್ವಿ ಡವ್ವಿ ಶುರು ಮಾಡಿಕೊಂಡಿದೆ.