ಧಾರವಾಡ: ನಾಲ್ಕನೇ ಶ್ರೇಯಾಂಕಿತ ಆಟಗಾರ ರಾಮ್‌ಕುಮಾರ ರಾಮನಾಥನ್ ಸಿಂಗಲ್ಸ್ ಪಂದ್ಯದಲ್ಲಿ ವಿಜಯಿಯಾಗುವುದರೊಂದಿಗೆ ಧಾರವಾಡ ಜಿಲ್ಲಾ ಲಾನ್ ಟೆನಿಸ್ ವತಿಯಿಂದ ಆಯೋಜನೆಗೊಂಡಿದ್ದ ಐಟಿಎಫ್ ಪುರುಷರ ಟೆನಿಸ್ ಪಂದ್ಯಾವಳಿ-2023 ತೆರೆ ಕಂಡಿತು.
ರಾಮನಾಥನ್ ಅವರು ಮೂರನೇ ಶ್ರೇಯಾಂಕಿತ ಆಟಗಾರ ದಿಗ್ವಿಜಯ ಪ್ರತಾಪಸಿಂಗ್ ಅವರಿಗೆ ಸೋಲುಣಿಸುವ ಮೂಲಕ 25 ಸಾವಿರ ಬಹುಮಾನ ಮೊತ್ತದ ಟೆನಿಸ್ ಪಂದ್ಯಾವಳಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ರಾಮನಾಥನ್ ಅವರು ದಿಗ್ವಿಜಯ ಅವರನ್ನು 7-6 (5), 7-6 (6) ಅಂಕಗಳಿಂದ ಪರಾಭವಗೊಳಿಸಿದರು. ಅತ್ಯಂತ ತುರುಸಿನಿಂದ ನಡೆದ ಸಿಂಗಲ್ಸ್ ಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ರಾಮನಾಥನ್ ತಮ್ಮ ಕೌಶಲ್ಯಪೂರ್ಣ ಹೊಡೆತಗಳು ಮತ್ತು ಆಕ್ರಮಣಶೀಲ ಆಟದಿಂದ ಎದುರಾಳಿಯನ್ನು ಕಂಗೆಡಿಸಿದರು. ಹೀಗಾಗಿ ಮೊದಲ ಸೆಟ್‌ನ್ನು 7-6 (5) ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ತಿರುಗಿ ಬಿದ್ದ ದಿಗ್ವಿಜಯ ಪ್ರತಾಪಸಿಂಗ್ ಹೋರಾಟದ ಆಟ ಆಡಿದರು. ಆದರೆ, ಅನುಭವಿ ರಾಮನಾಥನ್ ಸಂಯೋಜಿತ ಆಟದಿಂದಾಗಿ ಟೈಬ್ರೇಕರ್ ಆಯಿತು. ದಿಗ್ವಿಜಯಸಿಂಗ್ 3-0 ಅಂಕಗಳ ಲೀಡ್ ಪಡೆದರು. ಆದರೂ ಕೆಲವು ತಪ್ಪುಗಳಿಂದಾಗಿ ಜಯ ದಕ್ಕಲಿಲ್ಲ. ಇಷ್ಟಾಗಿಯೂ ದಿಗ್ವಿಜಯ ಪ್ರತಾಪಸಿಂಗ್ ತಾವೊಬ್ಬ ಅರ್ಹ ಅಂತಿಮ ಸುತ್ತು ಪ್ರವೇಶಿಸಿದ ಆಟಗಾರ ಎನ್ನುವುದನ್ನು ಸಾಬೀತುಗೊಳಿಸಿದರು.
ಕಳೆದ ಕೆಲವು ವಾರಗಳಿಂದ ನಾನು ಸಹಜ ಆಟಕ್ಕೆ ಕುದುರಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಿದ್ದೆ. ಈ ಜಯ ನಮ್ಮ ಮುಂದಿನ ಪಂದ್ಯಗಳಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಆಡಲು ಸಹಾಯಕವಾಗಲಿದೆ ಎಂದು ವಿಜೇತ ರಾಮಕುಮಾರ ರಾಮನಾತನ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.
ಫಲಿತಾಂಶ:
ಸಿಂಗಲ್ಸ್ ಪೈನಲ್ಸ್: ರಾಮಕುಮಾರ್, ರಾಮನಾಥನ್ ಅವರು ದಿಗ್ವಿಜಯ ಪ್ರತಾಪಸಿಂಗ್ ಅವರನ್ನು 7 -6 (5), 7-6 (6) ಅಂಕಗಳಿಂದ ಪರಾಭವಗೊಳಿಸಿ, ಸಿಂಗಲ್ಸ್ ಕಿರೀಟ ತಮ್ಮದಾಗಿಸಿಕೊಂಡರು.