Uncategorized

ಪ್ರಿಯದರ್ಶಿನಿ ಮಕ್ಕಳನ್ನು ಧಾರವಾಡಕ್ಕೆ ಕರೆತರುವ ಭರವಸೆ ನೀಡಿದ ವಿದೇಶಾಂಗ ಸಚಿವ ಜೈಶಂಕರ

Share

ಕೆಲವು ತಿಂಗಳ ಹಿಂದೆಯಷ್ಟೇ ಧಾರವಾಡದ ಪ್ರೊ.ಎಸ್.ಎಸ್. ದೇಸಾಯಿ ಅವರ ದ್ವಿತೀಯ ಪುತ್ರಿ, ಅನಿವಾಸಿ ಭಾರತೀಯಳಾಗಿದ್ದ ಪ್ರಿಯದರ್ಶಿನಿ ಲಿಂಗರಾಜ ಪಾಟೀಲ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಹೋರಾಡಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆಸ್ಟ್ರೇಲಿಯಾದಲ್ಲಿ ಗಂಡ ಹಾಗೂ ಮಕ್ಕಳ ಜೊತೆಗೆ ವಾಸವಾಗಿದ್ದ ಧಾರವಾಡ ಮೂಲದ ಪ್ರಿಯದರ್ಶಿನಿ, ಆಸ್ಟ್ರೇಲಿಯಾದಿಂದ ಭಾರತದ ತನ್ನೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಗೂ ಬಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾನೂನಾತ್ಮಕ ತೊಡಕಿನಿಂದ ಮೃತಳ ಮಕ್ಕಳು ಆಸ್ಟ್ರೇಲಿಯಾ ಸರ್ಕಾರದ ಸುಪರ್ದಿಯಲ್ಲಿದ್ದವು.

ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ನಿವಾಸದಲ್ಲಿ ಪ್ರಿಯದರ್ಶಿನಿ ಕುಟುಂಬಸ್ಥರು ಚರ್ಚೆ ನಡೆಸಿ, ಮೊಮ್ಮಕ್ಕಳನ್ನು ತಮ್ಮ ಸುಪರ್ದಿಗೆ ಕೊಡಿಸುವಂತೆ ಮತ್ತೊಮ್ಮೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅವರಿಗಾದ ಅನ್ಯಾಯವನ್ನು ಸರಿಪಡಿಸಲು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವ ಜೈಶಂಕ‌ರ್ ಅವರನ್ನು ಜೋಶಿ ಅವರು ಸಂಪರ್ಕಿಸಿ, ಮೃತಳ ಕುಟುಂಬದ ಸದಸ್ಯರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಅವರ ಮೊಮ್ಮಕ್ಕಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸುವ ಬಗ್ಗೆ ಭಾರತ ಸರ್ಕಾರವು ಸಹಾಯ ಮಾಡಬೇಕೆಂದು ವಾಸ್ತವ ಸ್ಥಿತಿಗತಿ ಹಾಗೂ ಕಾನೂನು ತೊಡಕನ್ನು ವಿವರಿಸಿದರು.

ವಿದೇಶಾಂಗ ಸಚಿವ ಜೈಶಂಕರ, ಪ್ರಹ್ಲಾದ ಜೋಶಿ ಅವರ ಮನವಿಗೆ ಸ್ಪಂದಿಸಿ, ಶೀಘ್ರದಲ್ಲೇ ಅವರ ಮೊಮ್ಮಕ್ಕಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

Tags: