ಬಿಜೆಪಿಯವರದ್ದು, ತಿರುಕನ ಕನಸು. ಬಿಜೆಪಿಯವರು ತಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಆಪರೇಷನ್ ಕಮಲದಲ್ಲಿ ಬಿಜೆಪಿ ಮಾಸ್ಟರ್ ಡಿಗ್ರಿ ತಗೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹರಿಹಾಯ್ದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಧಿವೇಶನ ಚನ್ನಾಗಿ ನಡೀತಾ ಇದೆ. ವಿಧಾನಪರಿಷತ್ ನಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಆದಷ್ಟು ಪ್ರಯತ್ನ ಮಾಡ್ತಾ ಇದ್ದಾರೆ. ಚರ್ಚೆ ಇನ್ನೊಂದು ವಾರ ನಡೆಯಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ಅಪೂರ್ಣವಾಗಿದೆ. ಮಂತ್ರಿಗಳು ಸದಸ್ಯರ ಪ್ರಶ್ನೆಗಳಿಗೂ ಉತ್ತರ ಕೊಡಬೇಕಾಗುತ್ತದೆ. ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಕಾಳಜಿಯಿಂದ ಬಹಳ ಗಂಭೀರವಾದ ವಿಚಾರಗಳ ಚರ್ಚೆ ನಡೆಯುತ್ತಿವೆ ಎಂದರು.
ಎಸ್.ಸಿ, ಎಸ್.ಟಿ ಅನುದಾನ ವಿಚಾರವಾಗಿ ಮಾತನಾಡಿದ ಅವರು, ಕೆಲವು ಸಂದರ್ಭದಲ್ಲಿ ಸಮತೋಲನ ಕಾಪಾಡಬೇಕಾಗುತ್ತೆ. 11,000 ಯಾರಿಗೂ ಕೊಡಕ್ಕಾಗಲ್ಲ ಅಂತ ಹೇಳಲಿಕ್ಕೆ ಬರುವುದಿಲ್ಲ
ಸ್ವಲ್ಪ ತಡ ಆಗಿದೆ. ಆದ್ರೆ ಸಿಗುತ್ತೆ, ಬೇರೆ ಕಾರ್ಯಕ್ರಮಗಳಿಗೆ ಹಣ ತೆಗೆದುಕೊಂಡಿರುತ್ತಾರೆ ಎಂದು ಅವರು ಹೇಳಿದರು.
ಡಿಕೆಶಿ ಸಿಎಂ ಆಗ್ತಾರೆಂಬ ನೊಣವಿನಕೆರೆ ಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸ್ವಾಮೀಜಿಗಳು ಹೇಳಿದ ಮೇಲೆ ನಾವೇನು ಹೇಳಲಿಕ್ಕೆ ಆಗುವುದಿಲ್ಲ. ಅದು ಸತ್ಯ ಆಗುತ್ತೋ ಇಲ್ವೋ ಅಂತ ಸ್ವಾಮೀಜಿಯವರನ್ನೇ ಕೇಳಬೇಕು. ನಾನು ನಾಸ್ತಿಕನೂ ಅಲ್ಲಾ, ಆಸ್ತಿಕನೂ ಅಲ್ಲಾ ಎಂದು ಪ್ರತಿಕ್ರಿಯೆ ನೀಡಿದರು.