Uncategorized

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬ: ಶಾಸಕರಿಗಷ್ಟೇ ಪಟ್ಟ ಕಟ್ಟೋದು ಬೇಡ ಎಂದ ಕಾಂಗ್ರೆಸ್ ಹೈಕಮಾಂಡ್

Share

ಮೊದಲ ಪಟ್ಟಿಯಲ್ಲಿ ಕೆಲ ಕಾರ್ಯಕರ್ತರಿಗೂ ಅವಕಾಶ ನೀಡಲು ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ. ಹೀಗಾಗಿ ಶಾಸಕರ ಜೊತೆಗೆ ಕಾರ್ಯಕರ್ತರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವಂತೆ ಸೂಚನೆ‌ ನೀಡಿದ್ದಾರೆ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಇನ್ನು ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ.

ನವದೆಹಲಿ, ಡಿಸೆಂಬರ್ 21: ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಕೊನೆಗೂ ನಿಗಮ ಮಂಡಳಿ ನೇಮಕ (Corporation Board Chairman) ಪ್ರಕ್ರಿಯೆಯನ್ನು ಬುಧವಾರ ಅಂತಿಮಗೊಳಿಸಿದ್ದರು. ಆದರೆ, ಅದಕ್ಕೀಗ ಕಾಂಗ್ರೆಸ್ ಹೈಕಮಾಂಡ್ (Congress high command) ಬ್ರೇಕ್ ಹಾಕಿದೆ. ನಿಗಮ ಮಂಡಳಿ ನೇಮಕ ವಿಚಾರವಾಗಿಯೇ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸರಣಿ ಸಭೆ ನಡೆಸಿದ್ದರು. ಬಳಿಕ ಹೈಕಮಾಂಡ್​​ಗೆ ಪಟ್ಟಿ ರವಾನಿಸಿದ್ದಾರೆ. ಆದರೆ ಹೈಕಮಾಂಡ್ ನಾಯಕರು ಸಿಎಂ, ಡಿಸಿಎಂ ಕಳುಹಿಸಿದ ಪಟ್ಟಿಯನ್ನು ತಡೆಹಿಡಿದಿದ್ದಾರೆ.

ಸಿಎಂ, ಡಿಸಿಎಂ‌ ಕಳುಹಿಸಿದ ಪಟ್ಟಿಯನ್ನು ಹೈಕಮಾಂಡ್ ನಾಯಕರು ತಡೆಹಿಡಿಯಲು ಕಾರಣವಿದೆ. ಸಿಎಂ ಹಾಗೂ ಡಿಸಿಎಂ ಕಳುಹಿಸಿದ ಮೊದಲ ಪಟ್ಟಿಯಲ್ಲಿ ಕೇವಲ ಶಾಸಕರ ಹೆಸರಿರುವುದನ್ನು ನೋಡಿದ ರಾಹುಲ್ ಗಾಂಧಿ, ಕೇವಲ ಶಾಸಕರಿಗೆ ಮಾತ್ರ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ‌.

ಮೊದಲ ಪಟ್ಟಿಯಲ್ಲಿ ಕೆಲ ಕಾರ್ಯಕರ್ತರಿಗೂ ಅವಕಾಶ ನೀಡಲು ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ. ಹೀಗಾಗಿ ಶಾಸಕರ ಜೊತೆಗೆ ಕಾರ್ಯಕರ್ತರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವಂತೆ ಸೂಚನೆ‌ ನೀಡಿದ್ದಾರೆ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಇನ್ನು ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ.

ಹೈಕಮಾಂಡ್ ನಾಯಕರ‌ ಜೊತೆ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಾವು ಕಳುಹಿಸಿದ ಪಟ್ಟಿಯನ್ನು ಹೈಕಮಾಂಡ್ ನಾಯಕರು ಇನ್ನೂ ನೋಡಿಲ್ಲ, ನೋಡಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.‌ ಎರಡು ಮೂರು ದಿನಗಳಲ್ಲಿ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಬಹುದು. ಆ ಬಳಿಕ ಪಟ್ಟಿ ಬಿಡುಗಡೆ ಬಗ್ಗೆ ತಿರ್ಮಾನ ಮಾಡಲಿದ್ದೇವೆ ಎಂದಿದ್ದಾರೆ.

ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲೂ ಹಲವು ಸಭೆ ನಡೆಸಿ ಪಟ್ಟಿ ತಯಾರಿ ಮಾಡಲಾಗಿತ್ತು. ನಮ್ಮ ಪಟ್ಟಿಯನ್ನು ಹೈಕಮಾಂಡ್ ಗೆ ನೀಡಲಾಗಿದೆ. ಚರ್ಚೆ ನಡೆಸಲಾಗಿದೆ, ಶೀಘ್ರದಲ್ಲಿ ವರಿಷ್ಠರು ತಿರ್ಮಾನ ತೆಗೆದುಕೊಳ್ಳಬಹುದು, ಕಾರ್ಯಕರ್ತರಿಗೂ ಅವಕಾಶ ನೀಡಲಾಗುವುದು. ಮೊದಲಿನಿಂದಲೂ ಈ ಪ್ರಸ್ತಾಪ ಇದೆ. ಕಾರ್ಯಕರ್ತರಿಗೆ ಅವಕಾಶ ನೀಡಲು ನಮ್ಮ ವಿರೋಧ ಏನಿಲ್ಲ. ಪಟ್ಟಿ ಬಿಡುಗಡೆ ಬಗ್ಗೆ ಹೈಕಮಾಂಡ್ ನಾಯಕರು ನಿರ್ಧರಿಸಲಿದ್ದಾರೆ ಎಂದಿದ್ದಾರೆ.

ಹೈಕಮಾಂಡ್ ನಾಯಕರ ಜೊತೆಗಿನ ಮೀಟಿಂಗ್​​ನಲ್ಲಿ ಸಿಎಂ, ಡಿಸಿಎಂ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದಾರೆ. 22ರ ಒಳಗೆ ಅಭ್ಯರ್ಥಿಗಳ ಆಯ್ಕೆ ಕುರಿತು ವರದಿ ಸಲ್ಲಿಸುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಉಸ್ತುವಾರಿಗಳು ಮೂರು ಅಭ್ಯರ್ಥಿಗಳ ಹೆಸರು ಸೂಚಿಸಬೇಕು, ಆ ಪಟ್ಟಿಯನ್ನು ಹೈಕಮಾಂಡ್​​ಗೆ ರವಾನಿಸಲಿದ್ದು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

Tags: