Uncategorized

ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ – ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ

Share

ರಾಯಚೂರು: ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ದೊಡ್ಮನೆ ಕಣ್ಮಣಿ ಪುನೀತ್ ರಾಜಕುಮಾರ್ (Puneeth Rajkumar) ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಸಾಕಷ್ಟು ಅಭಿಮಾನಿಗಳು ಈಗಾಗಲೇ ಭಿನ್ನ ವಿಭಿನ್ನ ರೀತಿಯಲ್ಲಿ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಆದರೆ ರಾಯಚೂರಿನ (Raichur) ಅಭಿಮಾನಿ ರೈತ ಕಲಾವಿದ ಸತ್ಯನಾರಾಯಣ ಮಾತ್ರ ವಿಶೇಷವಾಗಿ ನಿಲ್ಲುತ್ತಾರೆ

ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತ, ಅಪ್ಪು ಅಭಿಮಾನಿ ಸತ್ಯನಾರಾಯಣ ತನ್ನ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪು ಚಿತ್ರ ಬಿಡಿಸಿದ್ದಾರೆ. ಈ ಮೂಲಕ ಭತ್ತದ ಬೆಳೆಯಲ್ಲಿ ಪುನೀತ್ ರಾಜಕುಮಾರ್‌ನ ಜೀವಂತವಿರಿಸಿದ್ದಾರೆ.

ತೆಲಂಗಾಣ, ಗುಜರಾತ್‌ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಬೆಳೆದು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಬರದ ನಡುವೆಯೇ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ, ನಿತ್ಯ ನಿಗಾವಹಿಸಿ 90 ದಿನದ ಬೆಳೆಯಲ್ಲಿ ಅದ್ಭುತ ಕಲಾಚಿತ್ರ ಮೂಡಿಸಿದ್ದಾರೆ. ಭಾವಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಅನ್ನೋ ಅಕ್ಷರಗಳನ್ನೂ ಬೆಳೆಯಲ್ಲೇ ಬರೆದಿದ್ದಾರೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ಉತ್ತಮ ಬೆಳೆ ಬೆಳೆಯುವ ಮೂಲಕ ಅಪ್ಪು ದ್ವಿತೀಯ ಪುಣ್ಯಸ್ಮರಣೆಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ರೈತ (Farmer) ಸತ್ಯನಾರಾಯಣ ಅವರಿಗೆ ಅಪ್ಪು ಮೇಲೆ ಇರುವ ಅಭಿಮಾನಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಚಪ್ಪಲಿ ಹಾಕದೆ ಬರಿಗಾಲಲ್ಲೇ ಉಳುಮೆ ಮಾಡಿರುವ ರೈತ ಸತ್ಯನಾರಾಯಣ, ಗದ್ದೆಗೆ ಪೂಜೆ ಮಾಡುವ ಮೂಲಕ ಅಪ್ಪು ಮೇಲಿನ ಅಭಿಮಾನದ ಭಕ್ತಿಯನ್ನೂ ಮೆರೆಯುತ್ತಿದ್ದಾರೆ. ಸಾಮಾನ್ಯ ಕಣ್ಣಿಗೆ ಕಪ್ಪು, ಹಸಿರು ಬೆಳೆ ಮಾತ್ರ ಕಾಣುತ್ತಿದ್ದರೂ ಡ್ರೋನ್ ಕ್ಯಾಮೆರಾ ಕಣ್ಣಿಲ್ಲಿ ಅಪ್ಪು ಚಿತ್ರ ಮನಮೋಹಕವಾಗಿ ಮೂಡಿಬಂದಿದೆ.

ಈಗಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿರುವ ಸತ್ಯನಾರಾಯಣ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಅಶ್ವಿನಿಯವರ ಕೈಯಿಂದ ಅಪ್ಪು ಭಾವಚಿತ್ರವನ್ನು ಲೋಕಾರ್ಪಣೆ ಮಾಡಿಸುವ ಇಂಗಿತ ಹೊಂದಿದ್ದಾರೆ. ಒಟ್ಟಿನಲ್ಲಿ ಇಡೀ ದೇಶದಲ್ಲೇ ಅಪರೂಪದ ಕಲೆಯ ಮೂಲಕ ಅಪ್ಪು ಅಭಿಮಾನಿ ತನ್ನ ಅಭಿಮಾನವನ್ನು ಜಗತ್ತಿಗೆ ತೋರಿಸಿದ್ದಾರೆ.

Tags:

A picture of Appu in the paddy field - a farmer who gained popularity through different arts