Uncategorized

ಪೊಲೀಸರ ಎದುರೆ ವಿಷ ಕುಡಿದ ರೈತ

Share

ಜಮೀನು ವಿವಾದ ವಿಚಾರವಾಗಿ ರೈತನೊಬ್ಬ ಆತ್ಮಹತ್ಯೆ ಯತ್ನಿಸಿದ್ದಾನೆ.‌ ಅದು ಪೊಲೀಸರ ಸಮ್ಮುಖದಲ್ಲಿಯೇ ರೈತ ಬಾಳಯ್ಯ ವಿಷ ಕುಡಿದು ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ವಿಷ ಕುಡಿದ್ರು ತಕ್ಷಣವೇ ರೈತನ್ನ ಆಸ್ಪತ್ರೆಗೆ ಸಾಗಿಸದೇ ಪೊಲೀಸರು ನಿರ್ಲಕ್ಷ್ಯ ತೋರಿಸಿದ್ದಾರೆ. ರೈತ ವಿಷ ಕುಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಹೌದು..ರಾಜ್ಯದಲ್ಲಿ ದಿನೇ ದಿನೇ ಒಂದಿಲ್ಲೊಂದು ಕಾರಣಕ್ಕೆ ಅನ್ನದಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರಗಳು ಒಂದಿಲ್ಲೊಂದು ಯೋಜನೆ ರೂಪಿಸುತ್ತಿದ್ದಾರೆ. ನೀವು ಹೀಗೆ ನೋಡ್ತಿರೋ ವಿಡಿಯೋ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ್ದು. ಹೀಗೆ ಪೊಲೀಸರ ಸಮ್ಮುಖದಲ್ಲಿ ವಿಷ ಕುಡಿದ ರೈತ ಬಾಳಯ್ಯ ಕೋಣ್ಯಾಗೋಳ. ಇಂದು ಎಂದಿನಂತೆ ರೈತ ಬಾಳಯ್ಯ ಕೋಣ್ಯಾಗೋಳ ತನ್ನ ಜಮೀನಲ್ಲಿ ಕಬ್ಬು ಕಟಾವು ಆರಂಭಿಸಿದ್ದನು. ಆಗ ಪಕ್ಕ ಜಮೀನಿನ ನೀಲಕಂಠ ಬಂದು ಕಬ್ಬು ಕಟಾವು ಮಾಡದಂತೆ ಹೇಳಿದ್ದಾನೆ. ಆಗ ಇಬ್ಬರೂ ಮಧ್ಯೆ ಗಲಾಟೆ ಆರಂಭವಾಗಿದೆ. ಆಗ ನೀಲಕಂಠ 112 ಗೆ ಕರೆ ಮಾಡಿ ಪೊಲೀಸರನ್ನ ಸ್ಥಳಕ್ಕೆ ಕರೆಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಜಮೀನು ಗಲಾಟೆ ಇರೋದ್ರಿಂದ ಕಬ್ಬು ಕಟಾವು ಮಾಡದಂತೆ ರೈತ ಬಾಳಯ್ಯಗೆ ಹೇಳಿದ್ದಾರೆ. ಇದರಿಂದ ತನ್ನ ಜಮೀನಿನಲ್ಲಿ ಕಬ್ಬು ಕಟಾವು ಮಾಡುವುದನ್ನ ತಡೆದಿದ್ದಕ್ಕೆ ಅವರ ಮುಂದೆಯೇ ಗಟಗಟನೆ ವಿಷ ಕುಡದಿದ್ದಾನೆ. ರೈತ ಬಾಳಯ್ಯ ವಿಷ ಸೇವಿಸುತ್ತಿರುವುದನ್ನ ತಡೆಯೋ ಗೋಜಿಗೆ ಪೊಲೀಸರು ಮುಂದಾಗುವುದಿಲ್ಲ. ವಿಷ ಕುಡಿದು ಪೊಲೀಸ್ ವಾಹನದ ಮುಂದೆಯೇ ರೈತ ಬಾಳಯ್ಯ ಕೆಲ ಹೊತ್ತು ನರಳಾಡುತ್ತಾನೆ. ಆ ಬಳಿಕ ಆತನನ್ನ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ಸಾಗಿಸಲಾಗುತ್ತದೆ.

ಇನ್ನೂ ವಿಷ ಸೇವಿಸಿದ ರೈತ ಬಾಳಯ್ಯನನ್ನ ರಾಯಬಾಗ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.‌ಸದ್ಯ ಬಾಳಯ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಬಾಳಯ್ಯ ಮತ್ತು ನೀಲಕಂಠ ಜಮೀನು ಅಕ್ಕ ಪಕ್ಕದಲ್ಲಿವೆ. ಬಾಳಯ್ಯಗೆ ಸೇರಿದ 20 ಗುಂಟೆ ಜಮೀನಲ್ಲಿ ಕಬ್ಬಿನ ಫಸಲು ಕಟಾವಿಗೆ ಬಂದು ನಿಂತಿದೆ. ಹೀಗಾಗಿ ಕಬ್ಬು ಕಟಾವು ಮಾಡುವ ವಿಚಾರಕ್ಕಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ನನ್ನ ಮೇಲೆ ಪಕ್ಷದ ಜಮೀನಿನವರು ಮತ್ತು ಪೊಲೀಸರು ದಬ್ಬಾಳಿಕೆ ಮಾಡುತ್ತಿದ್ದಾರೆ. ನನ್ನ ತಾಯಿಗೆ ಆರೋಗ್ಯ ಸರಿಯಲ್ಲ. ಇದರಿಂದ ನಾನು ವಿಷ ಸೇವಿಸಿದ್ದೇನೆ.ನನಗೆ ಪೊಲೀಸರು ನ್ಯಾಯ ಒದಗಿಸಿಕೊಡಬೇಕು. ದಬ್ಬಾಳಿಕೆ ಮಾಡುವವರ ಮೇಲೆ ಕ್ರಮ ಜರುಗಿಸುವಂತೆ ಆಸ್ಪತ್ರೆಯಲ್ಲಿ ರೈತ ಬಾಳಯ್ಯ ಒತ್ತಾಯಿಸಿದ್ದಾನೆ.

ಒಟ್ಟಿನಲ್ಲಿ ಜಮೀನು ವಿಚಾರವಾಗಿ ರೈತ ಬಾಳಯ್ಯ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೈತನ ಆತ್ಮಹತ್ಯೆ ಯತ್ನವನ್ನ ತಪ್ಪಿಸಬಹುದಾದ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸಿದ್ದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.‌ಸದ್ಯ ರಾಯಬಾಗ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags: