ಹುಕ್ಕೇರಿ: ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕರ್ನಾಟಕ ರಾಜ್ಯೋತ್ಸವವನ್ನು ಹುಕ್ಕೇರಿಯಲ್ಲಿ ಇದೇ ತಿಂಗಳು ನ. 23 ರಂದು ಅತ್ಯಂತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ರವಿವಾರ ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾವೈಕ್ಯತೆಗೆ ಹೆಸರುವಾಸಿಯಾದ ಹುಕ್ಕೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿAದ ಆಚರಿಸಲು ತೀರ್ಮಾನಿಸಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿಯ ಯಶಸ್ವಿ ೩ನೇ ವರ್ಷದ ಅದ್ದೂರಿ ರಾಜ್ಯೋತ್ಸವ ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಿ ಅಂತಿಮಗೊಳಿಸಲಾಯಿತು. ಈ ಸಲದ ರಾಜ್ಯೋತ್ಸವವನ್ನು ವಿಶಿಷ್ಟ ಹಾಗೂ ವಿಶೇಷವಾಗಿ ಆಚರಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ನ.23 ರಂದು ಬೆಳಗ್ಗೆ 9 ಕ್ಕೆ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ವರೆಗೆ ನಡೆಯುವ ವಿವಿಧ ಕಲಾ ತಂಡಗಳ ಮೆರವಣಿಗೆಗೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡುವರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಕ್ಯಾರಗುಡ್ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ನಾಡು-ನುಡಿ, ನೆಲ-ಜಲ, ಭಾಷೆ-ಸಂಸ್ಕೃತಿ ಬಿಂಬಿಸುವ ರೂಪಕಗಳು ಮತ್ತು ಡೊಳ್ಳು, ಗೊಂಬೆ, ಕುದುರೆ ಕುಣಿತ, ವೀರಗಾಸೆ ಸೇರಿದಂತೆ ೨೦ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ.
ಮಧ್ಯಾಹ್ನ 12 ರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಯುವ ನಾಯಕರಾದ ಪೃಥ್ವಿ ಕತ್ತಿ, ಪವನ ಕತ್ತಿ ಚಾಲನೆ ನೀಡುವರು. ಈ ಭವ್ಯ ಡಾಲ್ಬಿ (ಡಿಜೆ) ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಹಳ್ಳಿಗಳು ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಯುವ ಸಮೂಹ ಭಾಗವಹಿಸುವ ನಿರೀಕ್ಷೆ ಇದೆ.
ಸ್ಮರಣೀಯ ರಾಜ್ಯೋತ್ಸವಕ್ಕೆ ಪಟ್ಟಣದ ಪ್ರಮುಖ ಬೀದಿ, ಆಯಕಟ್ಟಿನ ಸ್ಥಳಗಳನ್ನು ವಿದ್ಯುತ್ ದೀಪಾಲಂಕಾರ ಮತ್ತು ತಳಿರು-ತೋರಣಗಳಿಂದ ಶೃಂಗಾರ, ಕಟೌಟ್-ಬ್ಯಾನರ್ಗಳ ಅಳವಡಿಕೆ, ಪ್ರತಿ ಮನೆ ಮೇಲೆ ಕನ್ನಡ ಧ್ವಜಗಳ ಹಾರಾಟದ ವ್ಯವಸ್ಥೆ ಮಾಡಲಾಗುವುದು. ಇಡೀ ಹುಕ್ಕೇರಿಯಲ್ಲಿ ಕನ್ನಡದ ಅಸ್ಮಿತೆ ಅನಾವರಣವಾಗಲಿದೆ. ರಾಜ್ಯೋತ್ಸವಕ್ಕೆ ಯುವ ಸಮೂಹ, ಅನೇಕ ಸಂಘ-ಸAಸ್ಥೆಗಳು ಟೊಂಕ ಕಟ್ಟಿ ನಿಂತು ಹಗಲಿರುಳು ಕೆಲಸ ಮಾಡಲಿವೆ. ಇದೇ ವೇಳೆ ಕನ್ನಡ ಹೋರಾಟಗಾರರು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವಿವಿಧ ವಲಯಗಳ ಅದ್ವಿತೀಯ ಸಾಧನೆಗೈದವರನ್ನು ಸನ್ಮಾನಿಸಲಾಗುವುದು.
ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಜಯಗೌಡ ಪಾಟೀಲ, ಎ.ಕೆ.ಪಾಟೀಲ, ಸದಸ್ಯರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಭೀಮಶಿ ಗೋರಖನಾಥ, ಮಧುಕರ ಕರನಿಂಗ, ಕುಮಾರ ಜುಟಾಳೆ, ಹಿರಣ್ಯಕೇಶಿ ಕಾರ್ಖಾನೆ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಮುಖಂಡರಾದ ಅಪ್ಪುಶ ತುಬಚಿ, ಸುಹಾಸ ನೂಲಿ, ಗುರುರಾಜ ಕುಲಕರ್ಣಿ, ಜ್ಯೋತಿಬಾ ದುಪ್ಪಟ್ಟಿ, ರಮೇಶ ಬೋಳಗಾಂವಿ, ಸುಭಾಶ ಹಾವನ್ನವರ, ಸಂತೋಷ ಸುಣಗಾರ, ವೈಭವ ಶಿವಮೊಗ್ಗಿಮಠ, ಹಾಲಪ್ಪಾ ಗಡದವರ ಮತ್ತಿತರರು ಉಪಸ್ಥಿತರಿದ್ದರು.
Uncategorized
23ರಂದು ಹುಕ್ಕೇರಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ : ಮಾಜಿ ಸಂಸದ ರಮೇಶ ಕತ್ತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ
