ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ, ಆದರೆ ರಾಜಕೀಯ ಸನ್ಯಾಸಿ ಅಂತು ಅಲ್ಲ, ಪಕ್ಷ ಅವಕಾಶ ಮಾಡಿ ಕೊಟ್ಟರೆ ಬಿಡಲ್ಲ ಎಂದು ಬಿಜೆಪಿಯ ವಿಪ ಸದಸ್ಯ ಪ್ರದೀಪ್ ಶೆಟ್ಟರ್ ಹೊಸ ಬಾಂಬ್ ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಲವತ್ತು ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇವೆ. ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಲಿಂಗಾಯತ ಸಮೂದಾಯದ ಜನರಿದ್ದಾರೆ. ನಮ್ಮ ಸಮೂದಾಯ ಪ್ರಬಲವಾಗಿದೆ. ಹೀಗಾಗಿ ಸಹಜವಾಗಿಯೇ ಪಕ್ಷ ಲಿಂಗಾಯತರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಬಿಜೆಪಿಯ ನಾಯಕರ ವಿರುದ್ಧ ಯಾವುದೇ ಅಸಮಾಧಾನವಿಲ್ಲ, ಈ ಹಿಂದೆ ವೀರಶೈವ ಲಿಂಗಾಯರಿಗೆ ಪಕ್ಷದಲ್ಲಿ ಅನುಕೂಲ ಮತ್ತು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದೆ, ಅದರಂತೆ ಹೈಕಮಾಂಡ ನಮ್ಮ ಸಮುದಾಯದ ಯುವ ಮುಖಂಡ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದು ಸಹಜವಾಗಿ ಸಂತೋಷ ತಂದದೆ. ನಮ್ಮ ಜಾತಿ ಬಲಾಡ್ಯವಾಗಿದೆ, ಮುಂದೆಯೂ ನಮ್ಮ ಸಮೂದಾಯಕ್ಕೆ ಪಕ್ಷದಲ್ಲಿ ಹೆಚ್ಚು ಅವಕಾಶ ಸಿಗಬೇಕು. ಈ ಬಗ್ಗೆ ಸದ್ಯಯೂ ಆಗ್ರಹ ಮಾಡುತ್ತೇನೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನೀವು ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪ್ರಲ್ಹಾದ್ ಜೋಶಿ ಅವರು ಬೇರೆಡೆ ಹೋದರೇ ಜಾತಿ ಆಧಾರದ ಮೇಲೆ ಟಿಕೆಟ್ ಕೊಟ್ಟರು ಕೊಡಬಹುದು. ಈ ಹಿಂದೆ ಯಾರು ಆಕಾಂಕ್ಷಿ ಇರದೇ ಇದ್ದರೂ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಹಾಲಿ ಶಾಸಕರು ಟಿಕೆಟ್ ಪಡೆಯಲಿಲ್ಲವೇ? ಅದೇ ತರಹ ಕೊನೆಯ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ಕಾದು ನೋಡೋಣಾ ಎಂದು ಪರೋಕ್ಷವಾಗಿ ಪ್ರದೀಪ್ ಶೆಟ್ಟರ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ತೊಡೆತಟ್ಟಿದ್ದಾರೆ.
ಮುಂದುವರೆದು ಟಿಕೆಟ್ ಕೊಡಲಿಲ್ಲ ಅಂದ್ರು ಪರವಾಗಿಲ್ಲ, ಆದರೆ ಪಕ್ಷದ ವಿರುದ್ಧ ರೆಬಲ್ ಆಗೋದಿಲ್ಲ ಎಂದಿದ್ದಾರೆ.
ಇದಕ್ಕೂ ಮುನ್ನ ಪ್ರದೀಪ್ ಶೆಟ್ಟರ್ ಸಿಎಂ ಸಿದ್ದರಾಮಯ್ಯ ಅವರನ್ನು ಜಗದೀಶ್ ಶೆಟ್ಟರ್ ಅವರ ಮನೆಯಲ್ಲಿ ಭೇಟಿಯಾಗಿದ್ದರು, ಬಳಿಕ ತುಸು ಹೊತ್ತು ಚರ್ಚೆ ಕೂಡಾ ಮಾಡಿದ್ದರು. ಆದರೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ, ಅವಕಾಶ ಸಿಗಲಿಲ್ಲ. ಏನಾದರೂ ರಾಜಕೀಯ ಮಾತುಕತೆ ಆಗಿದ್ದರೆ ಖಂಡಿತವಾಗಿ ತಿಳಿಸುವೆ ಎಂದು ಹೇಳುತ್ತಲೇ ಪರೋಕ್ಷವಾಗಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಎಂದು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಪ್ರದೀಪ್ ಶೆಟ್ಟರ್ ಹೇಳಿಕೆ ಜಿಲ್ಲೆಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ.