ಕುಂದಾನಗರಿ ಬೆಳಗಾವಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡ ಮನಸ್ಸುಗಳ ಸಂಭ್ರಮ ಮನೆ ಮಾಡಿದೆ. ಬುಧವಾರ ಕರ್ನಾಟಕ ರಾಜ್ಯೋತ್ಸವದಂದು ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇಲ್ಲ. ಇಡೀ ಬೆಳಗಾವಿ ಕನ್ನಡದ ಜಾತ್ರೆಯಾಗಿ ಮಾರ್ಪಟ್ಟಿದ್ದು, ತಾಯಿ ಭುವನೇಶ್ವರಿಯ ಕನ್ನಡದ ತೇರು ಎಳೆದ ಕನ್ನಡಿಗರು ಸಂಭ್ರಮದಲ್ಲಿ ತೇಲಾಡಿದರು.
ಬುಧವಾರ ಬೆಳಗ್ಗೆಯಿಂದಲೇ ನಗರದೆಲ್ಲೆಡೆ ಕನ್ನಡ ಹಬ್ಬದ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಸಾಕ್ಷಿಯಾಗಿದ್ದಾರೆ. ನಗರದ ಕೇಂದ್ರ ಬಿಂದು ರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡಿಗರ ಉತ್ಸಾಹ ಮೇರೆ ಮೀರಿದೆ. ಕೈಯಲ್ಲಿ ಹಳದಿ ಕೆಂಪು ಧ್ವಜ ಹಿಡಿದುಕೊಂಡು ಕುಣಿಯುತ್ತಿರುವ ಯುವಪಡೆಯ ಉತ್ಸಾಹ ಸಂಭ್ರಮ ಮುಗಿಲು ಮುಟ್ಟಿದೆ. ಕಣ್ಣು ಹಾಯಿಸಿದಷ್ಟೂ ಕಿಕ್ಕಿರಿದು ಸೇರಿದ ಕನ್ನಡಿಗರು, ನಾಡು ನುಡಿಯ ವೈಭವ ಪಸರಿಸಿಕೊಂಡಿತ್ತು.
ಹಳದಿ ಕೆಂಪು ದ್ವಜಗಳ ಹಾರಾಟ, ಕನ್ನಡ ಚಿತ್ರಗೀತೆಗಳಿಗೆ ಕನ್ನಡಿಗರು ಕುಣಿದು ಕುಪ್ಪಳಿಸುವ ಮೂಲಕ ರಾಜ್ಯೋತ್ಸವದ ವೈಭವದ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು, ಯುವತಿಯರು, ಮಹಿಳೆಯರು, ಹಿರಿಯರು ವೈಭವದ ಮೆರವಣಿಗೆಯಲ್ಲಿ ಭಾಗಿಯಾದರು. ಯುವಜನರಂತೂ ಎದೆ ನಡುಗಿಸುವಂಥ ಡಿ.ಜೆ, ಡಾಲ್ಬಿ ಹಾಡಿಗೆ ಕುಣಿದು ಕುಪ್ಪಳಿಸಿದರು. ಬೆಳಗಾವಿ ನಗರದಲ್ಲಿ ರಾಜ್ಯೋತ್ಸವ ನಿಮಿತ್ಯ ಅದ್ದೂರಿಯಾಗಿ ವೈಭವಶಾಲಿಯಾಗಿ ರಾಜ್ಯದ ವಿವಿಧ ಭಾಗಗಳಿಂದ ಕನ್ನಡ ಅಭಿಮಾನಿಗಳು ಭಾವವಹಿಸಿ ಇವತ್ತಿನ ಕುಂದಾನಗರಿ ರಾಜ್ಯೋತ್ಸವಕ್ಕೆ ದಾಖಲೆ ಪಡಿಸಿದರು ಸುಮಾರು ೫ ಲಕ್ಷಕ್ಕೂ ಅಧಿಕ ಜನಾ ಭಾಗಿಯಾಗಿದ್ದರು
ರಾಜ್ಯದ ಎರಡನೇ ರಾಜಧಾನಿಯಾದ ಬೆಳಗಾವಿ ಯಾವುತ್ತು ಯಾವುದೇ ಉತ್ಸವವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗುತ್ತದೆ ಗಡಿ ಪ್ರದೇಶದಲ್ಲಿರುವ ಕುಂದಾನಗರಿಯನ್ನು ಇಡೀ ರಾಜ್ಯದ ಜನತೆ ಪ್ರೀತಿಸುತ್ತಾರೆ .ಯಾಕೆಂದರೆ ರಾಜ್ಯೋತ್ಸವ ಬಂದರೆ ಇಡೀ ರಾಜ್ಯದ ಜನತೆಯನ್ನು ಕುಂದಾನಗರಿ ಕಡೆಗೆ ಸಾಗರದಂತೆ ಹರಿದುಬರುತ್ತದೆ
೬೮ ನೇ ರಾಜ್ಯೋತ್ಸವ ಬೆಳಗಾವಿಯಲ್ಲಿ ಐತಿಹಾಸಿಕ ದಾಖಲೆಯಾಗಿದೆ ,ಮದ್ಯಾಹ್ನ ೧೨ ಗಂಟೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು ಮೆರವಣಿಗೆಯಲ್ಲಿ ಸರಕಾರದ ವಿವಿಧ ಇಲಾಖೆಯ ಯೋಜನೆಗಳ ರೂಪಕ ವಾಹನ ಭಾಗವಹಿಸಿದ್ದವು .
ಜಿಲ್ಲಾ ಕ್ರೀಡಾಂಗಣ ಪ್ರಾಂಗಣದಲ್ಲಿ ಪ್ರಾರಂಭವಾದ ಮೆರವಣಿಗೆ ಕೃಷ್ಣ ದೇವರಾಯ ವೃತ್ತ ,ಚನ್ನಮ್ಮ ವೃತ್ತ ,ಕಾಕತಿವೇಸ ರೋಡ ,ಶನಿವಾರ ಕೂಟ , ಗಣಪತ ಗಲ್ಲಿ ,ಮಾರುತಿಗಲ್ಲಿ ,ಇನ್ನಿತರ ಪ್ರದೇಶಗಳಲ್ಲಿ ಸಂಚಾರ ಮಾಡಿ ಸರದಾರ ಮೈದಾನದಲ್ಲಿ ಮುಕ್ತಾಯವಾಯಿತು .
ಅದೇ ರೀತಿ ವಿವಿಧ ಪ್ರದೇಶದಿಂದ ವಿವಿಧ ಸಂಘಟನೆಗಳು ತಾಯಿ ಭುವನೇಶ್ವರಿ ಮೂರ್ತಿಗೆ ಭವ್ಯಮೆರವಣಿಗೆಯನ್ನು ಆಯೋಜನೆ ಮಾಡಿದ್ದರು ,ಕುಂದಾನಗರಿ ಜನ ಈ ರಾಜ್ಯೋತ್ಸವ ಸಂಭ್ರಮಕ್ಕೆ ಮಧ್ಯರಾತ್ರಿಯಿಂದಲೇ ಕನ್ನಡ ಹಬ್ಬವನ್ನು ಆಚರಿಸಿದರು ಇವತ್ತು ಬೆಳಿಗ್ಗೆಯಿಂದ ಪುಟಾಣಿಗಳು ,ವೃದ್ದರು ಮಹಿಳೆಯರು ಯುವಕರು ಯುವತಿಯರು ಹಳದಿ ಕೆಂಪು ರಂಗುರಂಗಿನ ಉಡುಪುಗಳು ಹಬ್ಬಕ್ಕೆ ಮತ್ತಷ್ಟು ರಂಗುತಂದರು . ಮೆರವಣಿಗೆ ಮಾರ್ಗದಲ್ಲಿ ಅನೇಕ ಕನ್ನಡಪರ ಸಂಘಟನೆಗಳು ಮೆರವಣಿಯನ್ನು ಪುಷ್ಪಅರ್ಚನೆ ಮಾಡಿ ಸ್ವಾಗತಿಸಿದರು . ನಗರದ ಮೂಲೆಮೂಲೆಯಿಂದ, ಹಳ್ಳಿ ಪಟ್ಟಣಗಳಿಂದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಜಮಾಯಿಸಿದ್ದರು. ನಗರದ ವಿವಿಧ ಬಡಾವಣೆ, ಓಣಿಗಳು, ತಾಲೂಕಿನ ಹಳ್ಳಿ ಹಳ್ಳಿಯಿಂದ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನಸೆಳೆಯುತ್ತಿವೆ.
ಡಿಜೆ ಡಾಲ್ಬಿಗಳ ನಾದಕ್ಕೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಹಳದಿ ಕೆಂಪು ಧ್ವಜ ಹಿಡಿದುಕೊಂಡು ಕುಣಿಯುತ್ತಿರುವ ಕನ್ನಡಿಗರ ಸಂಭ್ರಮ ಮೇರೆ ಮೀರಿದೆ. ಕನ್ನಡ ಶಲ್ಯಾ ಹಾರಿಸಿ, ಧ್ವಜಗಳನ್ನು ತಿರುಗಿಸುತ್ತಿರುವ ಮೈನವಿರೇಳಿಸುವಂತಿತ್ತು. ರಾಜ್ಯದಲ್ಲಿಯೇ ಅದ್ಭುತವಾಗಿ ನಡೆಯುವ ಬೆಳಗಾವಿಯ ಮೆರವಣಿಗೆಯ ವೈಭವ ನೋಡುವುದೇ ಸೊಗಸು. ಕನ್ನಡದ ಮೇಲಿರುವ ಬೆಳಗಾವಿಗರ ಈ ಸಂಭ್ರಮ ಕಣ್ತುಂಬಿಕೊಳ್ಳಲು ಪಕ್ಕದ ಜಿಲ್ಲೆಯಿಂದ ಜನ ಬಂದಿದ್ದಾರೆ.
ಸಾಕಷ್ಟು ಕನ್ನಡ ಅಭಿಮಾನಿಗಳು ಯುವಕರು ಯುವತಿಯರು ಕನ್ನಡ ಗೀತೆ ಕರ್ನಾಟಕ ರತ್ನ ದಿವಂಗತ ಡಾ ಪುನೀತ ರಾಜಕುಮಾರ ಅವರ ಭಾವಚಿತ್ರದ ಜೊತೆ ಡಿಜೆ ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿದರು, ಮೆರವಣಿಗೆ ಮಾರ್ಗ ಹೊರತು ಪಡಿಸಿ ವಿವಿಧ ಪ್ರದೇಶದಲ್ಲಿ ಸಾಕಷ್ಟು ರಾಜ್ಯೋತ್ಸವ ವಾಹನಗಳು ಕಂಡುಬಂಡವು .
ಒಟ್ಟಾರೆ ಈ ಐಹಾಸಿಕ ಮೆರವಣಿಗೆಗೆ ಬುಧುವಾರ ರಾತ್ರಿವರೆಗೆ ಕನ್ನಡಹಬ್ಬ ಮುಂದುವರೆಯಿತು ,ಕರ್ನಾಟಕ ,ಗೋವಾ ,ಮಹಾರಾಷ್ಟ್ರದಿಂದ ಲಕ್ಷಾಂತರ ಕನ್ನಡ ಅಭಿಮಾನಿಗಳು ಭಾಗವಹಿಸಿ ಬೆಳಗಾವಿ ರಾಜ್ಯೋತ್ಸವ ಯಶ್ವಸಿಗೊಳಿಸಿದರು . ಈ ಸಂದರ್ಭದಲ್ಲಿ ಸಾವಿರಾರು ಪೊಲೀಸರು ಬಿಗಿ ಬಂದೋಬಸ್ತಗೆ ಸಹಕರಿಸಿದರು