Uncategorized

RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

Share

ಹೈದರಾಬಾದ್: ತೆಲಂಗಾಣದಲ್ಲಿ (Telangana) ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಈ ಹೊತ್ತಿನಲ್ಲೇ ಪಕ್ಷದಿಂದ ಯಾರು ಸಿಎಂ ಆಗುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಎಬಿವಿಪಿ ಸದಸ್ಯರಾಗಿ ಗುರುತಿಸಿಕೊಂಡಿದ್ದ ರೇವಂತ್‌ ರೆಡ್ಡಿ (Revanth Reddy) ಈಗ ಕಾಂಗ್ರೆಸ್‌ನ ಸಿಎಂ ರೇಸ್‌ನಲ್ಲಿದ್ದಾರೆ.
ರೇವಂತ್‌ ರೆಡ್ಡಿ ಅವರು ಈಗ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದಾರೆ. ಪಕ್ಷದ ಗೆಲುವಿನ ಸೂಚನೆಯೊಂದಿಗೆ ರೇವಂತ್ ರೆಡ್ಡಿ ಹೈದರಾಬಾದ್‌ನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ‘ಸಿಎಂ.. ಸಿಎಂ’ ಎಂದು ಘೋಷಣೆ ಕೂಗಿದ್ದಾರೆ.
ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್‌ ಹಿಂದಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ ಶ್ರೇಯ ರೇವಂತ್‌ ರೆಡ್ಡಿ ಅವರಿಗೆ ಸಲ್ಲುತ್ತದೆ ಎಂಬುದನ್ನು ‘ಕೈ’ ನಾಯಕರು ಪ್ರತಿಪಾದಿಸಿದ್ದಾರೆ. ಅಷ್ಟಕ್ಕೂ ಯಾರು ಈ ರೇವಂತ್‌ ರೆಡ್ಡಿ? ಇವರು ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸಿಎಂ ಆಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಯಾರು ಈ ರೇವಂತ್‌ ರೆಡ್ಡಿ?
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ, (56) ಅವರು ಪಕ್ಷದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದಕ್ಕೂ ಮೊದಲು ರೇವಂತ್‌ ರೆಡ್ಡಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಯಿಂದ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಅವರು ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ ಪರ ಅವರು ಕ್ಯಾಂಪೇನ್‌ ನಡೆಸುತ್ತಿದ್ದಾಗ, ಅವರ ಹಿನ್ನೆಲೆ ಹೆಚ್ಚು ಚರ್ಚೆಯಾಗುತ್ತಿದೆ
ರೇವಂತ್‌ ರೆಡ್ಡಿ ಆರ್‌ಎಸ್‌ಎಸ್‌ ಕೈಗೊಂಬೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಅನೇಕ ಬಾರಿ ಟೀಕಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಕೆಲವು ಕ್ಷೇತ್ರಗಳಲ್ಲಿ ಒಂದಾಗಿ ಕೆಲಸ ಮಾಡುತ್ತಿವೆ ಎಂದೂ ಸಹ ಓವೈಸಿ ಹಿಂದಿನ ದಿನಗಳಲ್ಲಿ ಆರೋಪಿಸಿದ್ದರು.
ರೇವಂತ್ ರೆಡ್ಡಿ ಅವರು ಎಬಿವಿಪಿಯಿಂದ ರಾಜಕೀಯ ಜೀವನ ಆರಂಬಿಸಿದರು. ನಂತರ ಟಿಡಿಪಿಗೆ ಹೋದರು. 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಲಂಚ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರು ಟಿಡಿಪಿ ತೊರೆದರು. 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ಸೇರಿದರು. 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ ವಿರುದ್ಧ ಸ್ಪರ್ಧಿಸಿ ಕೊಡಂಗಲ್‌ನಿಂದ ಸೋತರು. ಆದರೆ ಮತ್ತೆ ಪುಟಿದೆದ್ದು 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಜೂನ್ 2021 ರಲ್ಲಿ ಅವರನ್ನು TPCC ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

Tags: