Uncategorized

ಅಗಲಿದ ಅಲ್ಲಮಪ್ರಭು ಮಹಾಸ್ವಾಮೀಜಿಗೆ ಕಂಬನಿ ಮಿಡಿದ ಸಂತರು

Share

ಚಿಕ್ಕೋಡಿ:ಕನ್ನಡ ಸ್ವಾಮೀಜಿ ಖ್ಯಾತಿಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಸಿದ್ಧಸಂಸ್ಥಾನಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ(೬೩) ಭಾನುವಾರ ಬೆಳಿಗ್ಗೆ ೭.೨೪ ಗಂಟೆಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.

ಸಕ್ಕರೆ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಯಿಂದ ಶನಿವಾರ ಬೆಳಗಾವಿ ಕೆಎಲ್‌ಇ ಸಂಸ್ಥೆಯ ಡಾ,ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಿಗ್ಗೆ ಸ್ವಾಮೀಜಿ ದೇಹ ತ್ಯೇಜಿಸಿದರು. ೧೯೬೦ ರಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಜನಿಸಿದ ಸ್ವಾಮೀಜಿ ೧೯೯೧ರಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ತೋಂಟದಾರ್ಯ ಶಾಖಾ ಮಠದ ಪೀಠಾಧಿಪತಿಯಾದ ಅವರು ೧೯೯೪ರಲ್ಲಿ ಚಿಕ್ಕೋಡಿ ತಾಲೂಕಿನ ಚಿಂಚಣಿ ಶ್ರೀ ಅಲ್ಲಮಭು ಸಿದ್ಧಸಂಸ್ಥಾನಮಠಕ್ಕೆ ಅಧಿಪತಿಯಾಗಿ ನೇಮಕವಾದರು.
ಕಳೆದ ೩೦ ವರ್ಷದಿಂದ ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿ ಕನ್ನಡ ಉಳಿವಿಗಾಗಿ ಹಗಲು ರಾತ್ರಿ ಜಾಗೃತಿ ಮೂಡಿಸುತ್ತಿದ್ದರು. ಪ್ರತಿ ವರ್ಷ ನ.೨ ರಂದು ಶ್ರೀಮಠದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಿ ಕನ್ನಡ ಪುಸ್ತಕ ಪ್ರಕಟಿಸಿ ಕನ್ನಡಿಗರಿಗೆ ಓದಲು ಕೊಡುತ್ತಿದ್ದ ಸ್ವಾಮೀಜಿ ದೀಪಾವಳಿ ಹಬ್ಬದಲ್ಲಿ ಕನ್ನಡ ದೀಪ ಹಚ್ಚಿ ಮರೆಯಾಗಿದ್ದಾರೆ.

ಸ್ವಾಮೀಜಿ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಗಡಿ ಭಾಗದ ಕನ್ನಡಿಗರು ಮತ್ತು ಮಠದ ಭಕ್ತರು ಕಂಬನಿ ಮಿಡಿದಿದ್ದಾರೆ.
ಕನ್ನಡ ನುಡಿ, ಗಡಿ, ಸಂಸ್ಕೃತಿ ಸಂರಕ್ಷಣೆ ಮತ್ತು ಸಂವರ್ಧನೆಯ ದೀಕ್ಷೆ ತೊಟ್ಟು ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸುವ ಕೈಂಕರ್ಯದಲ್ಲಿ ಅವರು ಕ್ರಿಯಾಶೀಲರಾಗಿದ್ದರು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡ ಜಾಗೃತಿಯುಂಟು ಮಾಡುತ್ತಿದ್ದರು.
ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕ ಮಾಲೆಯ ಮೂಲಕ ಇದುವರೆಗೆ ೫೧ ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಮರಾಠಿಯ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ-ಮರಾಠಿ ಸಾಹಿತ್ಯ ಮತ್ತು ಸಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸಿದ್ದಾರೆ.
ಸ್ವಾಮೀಜಿಗಳು ಕನ್ನಡ ಪರವಾದ ಪುರಾತನ ದಾಖಲೆಗಳನ್ನು ಸಂಗ್ರಹಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಕನ್ನಡದ ಇತಿಹಾಸ ತಿಳಿಸುವ ಅಪರೂಪದ ದಾಖಲೆಗಳು ಅವರ ಬಳಿ ಇವೆ. ದೇಶ-ವಿದೇಶ ಕರೆನ್ಸಿಗಳ ಸಂಗ್ರಹವೂ ಇವೆ. ಬೋನ್ಸಾಯ್ ಸಸ್ಯ ಬೆಳೆಸುವ ಹವ್ಯಾಸ ಹೊಂದಿದ್ದರು. ಮಠಕ್ಕೆ ಸೇರಿದ ಜಮೀನಿನಲ್ಲಿ ಅರಣ್ಯ ಇಲಾಖೆ ಮೂಲಕ ಸಸಿ ನೆಟ್ಟು ಅಲ್ಲಮಪ್ರಭು ವನ ನಿರ್ಮಿಸಿ ಪರಿಸರ ಉಳಿವಿಗಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಸ್ವಾಮೀಜಿ ಚಿಂಚಣಿ ಅಲ್ಲಮಪ್ರಭು ಮಠದಲ್ಲಿ ಕನ್ನಡ ತೇರು ನಿರ್ಮಿಸಿ ಕಳೆದೊಂದು ದಶಕದಿಂದ ಸಿರಿಗನ್ನಡದ ತೇರು ಎಳೆಯುತ್ತಿದ್ದಾರೆ. ಅಪ್ಪಟ ಕನ್ನಡದ ರಥವಾಗಿರುವ ಇದರಲ್ಲಿ ೩೨ ಸಾಹಿತಿಗಳ ಚಿತ್ರಗಳು ಮತ್ತು ೧೬ ಕನ್ನಡದ ಘೋಷಣೆಗಳನ್ನು ಕೆತ್ತಲಾಗಿದೆ. ತೇರಿನ ಎಂಟು ಭಾಗಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಲಾಗಿದೆ. ಇದರ ನಡುವೆ ತಾಯಿ ಭುವನೇಶ್ವರಿ ಮೂರ್ತಿಯನ್ನು ಇರಿಸಿ ಪ್ರತಿ ವರ್ಷ ಯುಗಾದಿ ಹಬ್ಬದಂದು ತೇರನ್ನು ಎಳೆಯುವ ಸಂಪ್ರದಾಯ ಹಾಕಿಕೊಂಡು ಬಂದಿದ್ದರು.
ಕಳೆದ ೨೦ ವರ್ಷದಿಂದ ಪ್ರತಿ ವರ್ಷ ಮಠದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆಯಲ್ಲಿ ನಾಡಿನ ಖ್ಯಾತ ಸಾಹಿತಿಗಳು ಮತ್ತು ಕನ್ನಡದ ವಿದ್ವಾಂಸರನ್ನು ಕರೆಯಿಸಿ ಶ್ರೀಮಠವು ಮಾಡುವ ಕನ್ನಡದ ಕಾಯಕವನ್ನು ಪರಿಚಯ ಮಾಡುವ ಕೆಲಸ ಮಾಡಿದ್ದರು.

ಆದರೆ ಸ್ವಾಮೀಜಿಗಳು ಸಣ್ಣ ವಯಸ್ಸಿನಲ್ಲಿಯೇ ಇಹಲೋಕ ತ್ಯೇಜಿಸಿರುವುದು ಭಕ್ತ ಸಮೂಹದಲ್ಲಿ ದು:ಖ ಮಡುಗಟ್ಟಿದೆ.

Tags: