ಧಾರವಾಡ: ಧಾರವಾಡದಲ್ಲಿ ಕ್ಲಾಸಿಕ್ ಸಂಸ್ಥೆ ಹುಟ್ಟಿಕೊಂಡು 25 ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯ ರಜತಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮಣ ಉಪ್ಪಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.7 ಹಾಗೂ 8 ರಂದು ಸಂಸ್ಥೆಯ ರಜತಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ವಿವಿಧ ಮಠಾಧಿಪತಿಗಳು, ಸಚಿವರು, ಶಾಸಕರು ಕೂಡ ಆಗಮಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಕೇಂದ್ರ ರಾಜ್ಯ ಲೋಕ ಸೇವಾ ಆಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ, ಸರ್ಕಾರಿ ಸೇವೆಯ ಗುರಿ ಮುಟ್ಟಲಿ ಎಂಬ ಸದುದ್ದೇಶದ ಕನಸು ಕಟ್ಟಿಕೊಂಡು ಕರದಂಟಿನ ನಾಡು ಗೋಕಾಕದಿಂದ ಪೇಡಾನಗರಿ ಧಾರವಾಡಕ್ಕೆ ಬಂದ ಬಿ.ಇ. ಪದವಿಧರರಾದ ಲಕ್ಷಣ ಉಪ್ಪಾರ ಅವರು, “ದಿ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್” ಎಂಬ ಹೆಸರಿನಲ್ಲಿ 1997ರಲ್ಲಿ ಆರಂಭಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಸಂಸ್ಥೆಯು,
ಧಾರವಾಡ ಕೇಂದ್ರವಾಗಿಸಿಕೊಂಡು, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿಯೂ ಶಾಖೆಗಳನ್ನು ತೆರೆಯುವ ಮೂಲಕ ಇಂದು ಹೆಮ್ಮರವಾಗಿ ಬೆಳೆದು, ಸಾವಿರಾರು ಯುವಕ ಯುವತಿಯರು ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದೆ.ಕ್ಲಾಸಿಕ್ ಪ್ರಕಾಶನ ಸಂಸ್ಥೆ ಮೂಲಕ ಪ್ರಕಟಗೊಳ್ಳುತ್ತಿರುವ ಸ್ಟಡಿ ಪ್ಲ್ಯಾನರ್, ಕಾಂಪಿಟೇಶನ್ ವಿಜನ್, ಸರ್ಧಾಸ್ಫೂರ್ತಿ, ಉದ್ಯೋಗ ವಾರ್ತೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಾಗೂ ಉದ್ಯೋಗಾರ್ಥಿಗಳಿಗೆ ದಾರಿದೀಪವಾಗಿವೆ ಎಂದರು.