Uncategorized

ರೈತನಿಗೆ ಬರದ ಗಾಯದ ಮೇಲೆ ಬರೆ ಎಳೆದ ಹಕ್ಕಿಗಳ ಕಾಟ:ಅನ್ನದಾತನಿಗೆ ಯಾಕೀಷ್ಟು ತಾಪತ್ರಯ?

Share

ರೈತರು ಪ್ರತಿವರ್ಷವೂ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಲೇ ಇರುತ್ತಾರೆ. ಒಂದು ವರ್ಷ ಅತಿವೃಷ್ಟಿ, ಮತ್ತೊಂದು ವರ್ಷ ಅನಾವೃಷ್ಟಿಯಿಂದಾಗಿ ಬೆಳೆ ಹಾಳಾಗಿ ಸದಾಕಾಲವೂ ಬರ, ಬರ ಎನ್ನುವ ಪರಿಸ್ಥಿತಿ ಈ ಭಾಗದ ರೈತರದ್ದಾಗಿದೆ. ಆದ್ರೆ ಕೆಲವೆಡೆ ಮಳೆ ಆಗಿದ್ದು ಬೆಳೆದ ಬೆಳೆಗೆ ಹಕ್ಕಿಗಳ ಕಾಟದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಈ ವರ್ಷ ವಿಜಯಪುರ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರು ಬೆಳೆ ಮಾತ್ರ ಚನ್ನಾಗಿಯೇ ಬಂದಿದೆ. ಹಲವೆಡೆ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬಂದಿದೆ ಎಂದು ಖುಷಿಪಟ್ಟ ರೈತರಿಗೆ ಸದ್ಯ ಬೆಳೆ ಉಳಿಸಿಕೊಳ್ಳಲು ಸರ್ಕಸ್ ನಡೆಸಿದ್ದಾರೆ. ಈ ಬಾರಿ ಮುಂಗಾರು ಬೆಳೆ ಹಾನಿಯಾದರೇನು ಹಿಂಗಾರು ಬೆಳೆಯನ್ನಾದರು ಚೆನ್ನಾಗಿ ಬೆಳೆಯೋಣ ಎಂದುಕೊಂಡಿದ್ದ ರೈತರು. ಇದೀಗ ಹಿಂಗಾರು ಬೆಳೆಗೆ ಹಕ್ಕಿಗಳ ಕಾಟ ಶುರುವಾಗಿದೆ. ಹಕ್ಕಿಗಳಿಂದ ಬೆಳೆ ರಕ್ಷಿಸಲು ರೈತರು ಪರದಾಡುವಂತಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ಸಮೀಪದ ತಿಮ್ಮಾಪುರ ಗ್ರಾಮದ ರೈತ ಶಂಕ್ರಪ್ಪ ತಿಮ್ಮಾಪುರ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಕಬ್ಬು, ಜೋಳ, ಸಜ್ಜೆ ಸೇರಿದಂತೆ ನಾನಾ ತಳಿಯ ಬೆಳೆಗಳನ್ನ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಸಜ್ಜೆಯನ್ನ ಬಿತ್ತನೆ ಮಾಡಿ ಸುಮಾರು ಮೂರು ತಿಂಗಳು ಸಮೀಪಿಸುತ್ತಿದೆ. ತೆನೆಗಳು ಸಮೃದ್ಧವಾಗಿ ಬೆಳೆದು ನಿಂತಿದೆ. ಹೀಗೆ ತೆನೆ ಕಟ್ಟಿದ ಸಜ್ಜೆ ತೆನೆಗಳಿಗೆ ಸದ್ಯ ಹಕ್ಕಿಗಳ ಕಾಟ ಹೆಚ್ಚಾಗಿದೆ. ಇದನ್ನ ತಪ್ಪಿಸಲು ರೈತರು ಮನೆಯಲ್ಲಿರುವ ಗಾಣದ ಎಣ್ಣೆ ಡಬ್ಬೆಯನ್ನ ಸಾಧನ ಮಾಡಿಕೊಂಡಿದ್ದಾರೆ. ‌ಆ ಖಾಲಿ ಡಬ್ಬಗಳಿಗೆ ಎರಡು ಸಣ್ಣ ರಂಧ್ರಗಳನ್ನ ಮಾಡಿ ಅದಕ್ಕೆ ದಾರದಿಂದ ಕಟ್ಟಿ ಹೆಗಲಿಗೆ ಹಾಕಿಕೊಂಡು ಕಟ್ಟಿಗೆಯಿಂದ ಡಬ್ಬೆಗೆ ಬಡೆಯುತ್ತ ಜಮೀನ ತುಂಬೆಲ್ಲ ಸಂಚರಿಸಿ ಹಕ್ಕಿಗಳನ್ನ ಬೆದರಿಸಿ ಬೆಳೆಯನ್ನ ರಕ್ಷಿಸುತ್ತಾರೆ.

ಒಟ್ನಲ್ಲಿ ಜಮೀನು ನೋಡಿಕೊಂಡು ಬೆಳೆಗಳನ್ನ ಹಕ್ಕಿಗಳಿಂದ‌ ರಕ್ಷಿಸಲೆಂದು. ಬೆಳೆಯನ್ನ ಬಂಗಾರದಂತೆ ರಕ್ಷಿಸುತ್ತಿದ್ದಾರೆ. ಜಗಕ್ಕೆ ಅನ್ನ ನೀಡುವ ಅನ್ನದಾತನಿಗೆ ಒಂದಿಲ್ಲೊಂದು ರೀತಿಯಲ್ಲಿ ಕಷ್ಟ ಎದುರಾಗುತ್ತಿವೆ. ರೈತರ ಆತ್ಮಸ್ಥೈರ್ಯ ಕುಗ್ಗಿಸುತ್ತಿವೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಸ್
ವಿಜಯಪುರ

Tags: