Uncategorized

ಹುಲಿ ಬೇಟೆಗಾರ ಚಿಕಾ ಪವಾರ್‌ ಈಗ ಅರಣ್ಯ ಇಲಾಖೆಯ ಅತಿಥಿ

Share

ಮಹತ್ವದ ಕಾರ್ಯಾಚರಣೆಯಲ್ಲಿ ಕುಖ್ಯಾತ ಹುಲಿ ಬೇಟೆಗಾರ ಚಿಕಾ ಅಲಿಯಾಸ್‌ ಕೃಷ್ಕಾ ಪಟ್ಟೆ ಪವಾರ್‌ ಎಂಬುವವನನ್ನು ಬೆಳಗಾವಿ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಹೌದು ಇದೇ ವರ್ಷ ಜುಲೈ ತಿಂಗಳಿನಲ್ಲಿ ಬೆಳಗಾವಿ ವಿಭಾಗದ ಖಾನಾಪೂರ ತಾಲೂಕಿನ ಖಾನಾಪೂರ ಪ್ರಾದೇಶಿಕ ಅರಣ್ಯ ವಲಯದ ಜಳಗಾ ಎಂಬಲ್ಲಿ ಶ್ರೀಗಂಧ ಮರಗಳ ಕಳ್ಳತನವಾಗಿತ್ತು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಖಾನಾಪೂರ ಉಪ ವಿಭಾಗದ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೆಲ ದಿನಗಳ ಹಿಂದೆ ಆರೋಪಿಗಳು ಬೆಳಗಾವಿ ನಗರದ ಕಣಬರ್ಗಿ ಬಳಿಯ ಕಲಕಾಂಬ ಬಳಿ ಅಡಗಿದ್ದರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾನಾಪೂರ ವಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಟೆಂಟ್ ಒಂದರ ಮೇಲೆ ದಾಳಿ ನಡೆಸಿದಾಗ ಟೆಂಟಿನಲ್ಲಿ ಶ್ರೀಗಂಧ ತುಂಡುಗಳು ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿತ್ತು ಹಾಗೂ ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಬಂಧಿತನು ಮೂಲತಃ ಮಧ್ಯಪ್ರದೇಶದವನೆಂದು ತಿಳಿದು ಅನುಮಾನಗೊಂಡು ತೀವು ವಿಚಾರಣೆ ನಡೆಸಿದ ಖಾನಾಪೂರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ ಸಂತೋಷ್ ಚವ್ಹಾಣ್‌ ರವರ ನೇತೃತ್ವದ ತಂಡ ಬಂಧಿತನು ಮಧ್ಯಪ್ರದೇಶದ ದಾಮೋ ಜಿಲ್ಲೆಯ ಸಗೋನಿ ಗ್ರಾಮದ ಚಿಕಾ ಅಲಿಯಾಸ್‌ ಕೃಷ್ಮಾ ವಟ್ಟೆಸವಾ‌ ಎಂದೂ ಹಾಗೂ ಈತ ದೇಶದ ಕುಖ್ಯಾತ ಹುಲಿ ಬೇಟೆಗಾರ ಎಂಬುದು ಗೊತ್ತಾಗಿದೆ. ಆರೋಪಿತನ ಮೇಲೆ ಈಗಾಗಲೇ ಮಹಾರಾಷ್ಟ್ರ, ರಾಜ್ಯದ ಅಮರಾವತಿ, ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾಡಿರುವ ಪ್ರಕರಣಗಳಿವೆ ಹಾಗೂ ಕೆಲ ವರ್ಷಗಳ ಹಿಂದೆ ಮೃತಪಟ್ಟ ಕುಖ್ಯಾತ ಹುಲಿ ಬೇಟೆಗಾರ ಸಂಸಾ‌ ಚಂದ್‌ ತಂಡದ ಸದಸ್ಯವೆಂದು ಗೊತ್ತಾಗಿದೆ.

ಈ ಕಾರ್ಯಾಚರಣೆಯನ್ನು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್ ಚವ್ಹಾಣ್ ರವರ ಮಾರ್ಗದರ್ಶನದಲ್ಲಿ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಂಕರ್‌ ಕಲ್ಲೋಳಿಕರ್ ರವರ ನೇತೃತ್ವದಲ್ಲಿ, ಖಾನಾಪೂರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ್ ಚವ್ಹಾಣ್, ಖಾನಾಪೂರ ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ನಾಗರಾಜ್‌ ಬಾಲೇಹೊಸೂರ್ ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ನಡೆಸಿದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.

ಸದರಿ ಪ್ರಕರಣದ ಕುರಿತು ಮಹಾರಾಷ್ಟ್ರ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಜೊತೆಗೆ ಸಂವಹನ ಸಾಧಿಸಿ ವಿವರವಾದ ತನಿಖೆ ನಡೆಸುವಂತೆ ಹಾಗೂ ಶೀಘ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ, ಮಹಾ ನಿರೀಕ್ಷಕ ರಾಜೇಂದ್ರ ಗಾರವಾಡ ರವರು ಸಹ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದು ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ವಿಚಾರಣೆ ಪ್ರಗತಿಯಲ್ಲಿರುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ತಾಫ್.ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

Tiger hunter Chika Pawar is now a guest of the Forest Department